Thursday, January 18, 2024

ವಿಭಿನ್ನ ಅನುಭವದ ಸ್ಕೂಬಾ ಡೈವಿಂಗ್

ಬದುಕಿನಲ್ಲಿ ಆಗಾಗ ಸ್ವಲ್ಪ ವಿಭಿನ್ನವಾದ ಹಾಗೂ ಹೊಸ ಹೊಸ ಸಾಹಸಗಳಿಗೆ ಕೈ ಹಾಕಬೇಕು ಅನ್ನೋದು ನನ್ನ ಅಲೋಚನೆ. ಅದೇ ಕಾರಣಕ್ಕೆ ಸಮಯ ಸಿಕ್ಕಾಗಲೆಲ್ಲಾ ಏನಾದರೂ ಹೊಸ ಪ್ರಯೋಗ ಮಾಡುತ್ತಲೇ ಇರುತ್ತೇನೆ. ಈ ಬಾರಿಯೂ ಏನಾದರೂ ಹೊಸತನ್ನು ಮಾಡಬೇಕು ಎಂದು ಬಹಳ ದಿನಗಳಿಂದ ಯೋಜನೆ ಹಾಕಿದ್ದೇ ಬಂತು, ಆದರೆ ಕಾರ್ಯರೂಪಕ್ಕೆ ತರಲಾಗಲಿಲ್ಲ. 



ಕೊನೆಗೆ ಒಂದು ದಿನ ಬ್ಯಾಗ್ ಏರಿಸಿಕೊಂಡು ಹೊರಟೇ ಬಿಟ್ಟೆ. ಹೊರಡುವಾಗ ನಾನೂ ಸ್ಕೂಬಾ ಡೈವಿಂಗ್ ಮಾಡುತ್ತೇನೆ ಎಂಬ ಖಾತ್ರಿ ಮಾತ್ರ ಇರಲಿಲ್ಲ. ಗೆಳೆಯನ ಸಲಹೆ ಮೇರೆಗೆ ಒಮ್ಮೆ ಪ್ರಯತ್ನ ಮಾಡೋಣ ಎಂದು ಮುಂದಾದೆ. 

ಹಾಗಾಗಿ ಮುರುಡೇಶ್ವರದಲ್ಲಿರುವ ರೀಫ್ ಅಡ್ವೆಂಚರ್ಸ್ ಸ್ಕೂಬಾ ಡೈವಿಂಗ್ ತಲುಪಿದೆ. ಹೋಗುವಾಗ ಬಹಳ ಕೌತುಕ, ಆಶ್ಚರ್ಯ ಎಲ್ಲವೂ ಮನದಲ್ಲಿ ಇತ್ತು. ಸ್ಕೂಬಾ ಡೈವಿಂಗ್ ನಡೆಸುವ ಮಾಲೀಕರು ಬೆಳಗ್ಗೆ 8.30ರ ಒಳಗಾಗಿ ಮುರುಡೇಶ್ವರದಲ್ಲಿದ್ದರೆ ಉತ್ತಮ ಎಂದರು ಎಂಬ ಕಾರಣಕ್ಕಾಗಿ ಲಗುಬಗೆಯಿಂದಲೇ ಎದ್ದು ಸಿದ್ಧಳಾಗಿ ಹೊರಟೆ. 


ಈ ಮೊದಲು ಟ್ರಕ್ಕಿಂಗ್ ಮಾಡಿದ ಅನುಭವ ಮಾತ್ರವೇ ನನಗಿತ್ತು. ಆದರೆ ನೀರಲ್ಲಿ ಈಜಿದ ಅಥವಾ ಸ್ಕೂಬಾ ಡೈವಿಂಗ್ ನಂತಹ ಸಾಹಸ ಮಾಡಿ ತಿಳಿದಿರಲಿಲ್ಲ. ಅದೇ ಕಾರಣಕ್ಕಾಗಿ ಆ ಸಾಹಸಕ್ಕೆ ಕೈ ಹಾಕಿದ್ದೆ. ಮನಸ್ಸು ಶಾಂತವಾಗಿತ್ತು. ಯಾವುದೇ ಆತಂಕ, ಭಯ ಇರಲಿಲ್ಲ. 

ರೀಫ್ ಅಡ್ವೆಂಚರ್ಸ್ ತಲುಪುವುದರೊಳಗೆ ಒಂದಷ್ಟು ಸಾಹಸಿಗಳು ಬಂದಿದ್ದರು. ಒಂದಷ್ಟು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಬೋಟ್ ಮೂಲಕ ನೇತ್ರಾಣಿ ದ್ವೀಪಕ್ಕೆ ತೆರಳಬಹುದು ಎಂದು ಹೇಳಿದರು. ಸರಿ ಎಂದು ದೇವಸ್ಥಾನದ ಪಕ್ಕದ ಬಳಿ ಇರುವ ಸಮುದ್ರವನ್ನು ಸುಮ್ಮನೆ ನೋಡುತ್ತಾ ನಿಂತೆ. 

ಚಳಿಗಾಲವಾದ್ದರಿಂದ ಅಲೆಗಳ ಅಬ್ಬರ ಅಷ್ಟಾಗಿರಲಿಲ್ಲ. ಸಮುದ್ರವೂ ಶಾಂತವಾಗಿತ್ತು. ಪಕ್ಕದಲ್ಲಿ ಪ್ರತಿಷ್ಠಾಪಿಸಿದ ಶಿವನೂ ಧ್ಯಾನದಲ್ಲಿ ಮಗ್ನನಾಗಿದ್ದ. ಹಾಗಾಗಿ ಬೆಳಗಿನ ಬೆರಗು ಶಾಂತವಾದ ಭಾವವನ್ನು ಹೊರಸೂಸುತ್ತಿತ್ತು. 

ಅಡ್ವೆಂಚರ್ಸ್ ತಂಡದವರು ಲಗುಬಗೆಯಿಂದಲೇ ಬೋಟ್ಗೆ ಸಾಮಾನುಗಳನ್ನು ತುಂಬುವ ಕೆಲಸದಲ್ಲಿ ತೊಡಗಿದ್ದರು. ಅವರೆಲ್ಲರ ಮುಖದಲ್ಲೂ ಎಂದಿನ ಏಕತಾನತೆ ಬದಲಾಗಿ ಹೊಸ ಸಾಹಸಕ್ಕೆ ಹೊರಟು ನಿಂತ ವೀರರಂತೆ ಕಾಣುತ್ತಿದ್ದರು. ಉತ್ಸಾಹ ಚಿಮ್ಮುತ್ತಿತ್ತು. ಸುಮಾರು 10.30ರ ವೇಳೆಗೆ ಬೋಟ್ ನೇತ್ರಾಣಿ ತಟಕ್ಕೆ ಹೊರಟಿತು. 

ಸ್ಕೂಬಾ ಡೈವಿಂಗ್ ಮಾಡಲು ಸುಮಾರು 40 ಜನರು ಸಿದ್ಧರಾಗಿ ಬಂದಿದ್ದರು. ಅವರುಗಳೆಲ್ಲರ ಮಧ್ಯೆ ನಾನೂ ಸೇರಿಕೊಂಡಿದ್ದೆ. ಮುರುಡೇಶ್ವರದಿಂದ ಸುಮಾರು ಒಂದುವರೆ ಗಂಟೆ ಸಮುದ್ರದಲ್ಲಿ ಪ್ರಯಾಣ ಮಾಡಿದ ನಂತರ ಸ್ಕೂಬಾ ಡೈವಿಂಗ್ ಮಾಡುವ ಸ್ಥಳಕ್ಕೆ ತಲುಪಿದೆವು. ಅಲ್ಲಿದ್ದ ಎಲ್ಲರಿಗೂ ನೀರಿನೊಳಗೆ ಧುಮುಕುವ ತವಕ. ಮೊದಲ ಬಾರಿಗೆ ಸ್ಕೂಬಾ ಡೈವಿಂಗ್ ಗೆ ಹೋಗಿದ್ದರಿಂದ ಒಂದಷ್ಟು ಕುತೂಹಲ ಸಹಜವಾಗಿಯೇ ಇತ್ತು. 

ಸ್ಕೂಬಾ ಡೈವಿಂಗ್ ತರಬೇತುದಾರರು ಅಲ್ಲಿದ್ದ ಎಲ್ಲರಿಗೂ ಸ್ಕೂಬಾ ಡೈವಿಂಗ್ ಮಾಡುವ ಸಂದರ್ಭದಲ್ಲಿ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒಂದಷ್ಟು ಮಾರ್ಗದರ್ಶನ ನೀಡಿದ ನಂತರ ಬೋಟ್ ನಿಂದ ನೀರಿಗೆ ಹಾರಿದ್ದರು. 

ಹೀಗೆ, ತರಬೇತುದಾರರು ಒಬ್ಬರಾದ ನಂತರ ಮತ್ತೊಬ್ಬರು ನೀರಿಗೆ ಹಾರಿದ ನಂತರ ನಮ್ಮಗಳ ಸರದಿ ಆರಂಭವಾಯಿತು. ಇಡೀ ತಂಡದಲ್ಲಿ ನಾನೇ ಮೊದಲಿಗನಾಗಿದ್ದೆ. ಆಕ್ಸಿಜನ್ ಸಿಲಿಂಡರ್, ಪವರ್ ಮಾಸ್ಕ್ ಹಾಕಿಕೊಂಡು ಮಾನಸಿಕವಾಗಿ ತಯಾರಿ ಮಾಡಿಕೊಳ್ಳುವ ಮುನ್ನವೇ ನೀರಿಗೆ ನನ್ನನ್ನು ತಳ್ಳಿಬಿಟ್ಟಿದ್ದರು. ಒಂದು ಕ್ಷಣಕ್ಕೆ ಏನಾಗುತ್ತಿದೆ ಎಂದು ಅರಿಯುವುದರ ಒಳಗಾಗಿ ನೀರಿನಲ್ಲಿ ಒಂದು ರೌಂಡ್ ಹಾಕಿ ಆಗಿತ್ತು. 

ಹಿಂದೆ ಮುಂದಾಗಿ ಬಿದ್ದಿದ್ದರಿಂದಲೋ ಅಥವಾ ಅಷ್ಟೊಂದು ಎತ್ತರದಲ್ಲಿ ಹರಿಯುತ್ತಿರುವ ನೀರನ್ನು ನೋಡಿದ ಕಾರಣಕ್ಕೋ ಏನೋ ಮನಸ್ಸಿನಲ್ಲಿ ಭಯ ಮಡುಗಟ್ಟಿ ಬಿಟ್ಟಿತ್ತು. 



ಸ್ಕೂಬಾ ಡೈವಿಂಗ್ ತರಬೇತುದಾರರು ನನ್ನನ್ನು ಶಾಂತಗೊಳಿಸಲು ಸಾಕಷ್ಟು ಬಾರಿ ಪ್ರಯತ್ನ ಮಾಡಿದರೂ ತಹಬಂಧಿಗೆ ಬರಲೇ ಇಲ್ಲ. ಮುಳುಗಿ ಬಿಡುತ್ತೇನೆ ಎಂಬ ಭಯವೂ ಅಥವಾ ಉಸಿರಾಡಲಯ ಕಷ್ಟವಾಗುತ್ತಿದೆ ಎಂಬ ಆತಂಕವೋ ಗೊತ್ತಿಲ್ಲ. ಆದರೆ ಭಯದಿಂದ ಅಕ್ಷರಶಃ ನಡುಗುತ್ತಿದ್ದೆ. 

ಸುಮಾರು 10-15  ನಿಮಿಷಗಳ ಕಾಲ ನೀರಿನಲ್ಲಿ ಈಜಲೂ ಆಗದೇ, ಸಮುದ್ರದ ಆಳವನ್ನು ಸರಿಯಾಗಿ ನೋಡಲೂ ಆಗದೇ ಒದ್ದಾಡಿ ಬಿಟ್ಟದ್ದು ಮಾತ್ರ ಸುಳ್ಳಲ್ಲ. ಇದೆಲ್ಲದರ ಮಧ್ಯೆ ಒಂದಷ್ಟು ಫೋಟೊ, ವೀಡಿಯೋಗೆ ಫೋಸ್ ಕೊಟ್ಟು ನೀರಿನ ಮೇಲೆ ತೇಲಾಡಿಕೊಂಡು ಬೋಟ್ ಹತ್ತಿದೆ. ಆಗಲೇ ಹೋದ ಜೀವ ಮತ್ತೆ ಬಂದಂತಾಗಿತ್ತು. ಅಲ್ಲಿಯವರೆಗೂ ಅದೊಂದು ರೀತಿಯ ಭಯ ನನ್ನಲ್ಲಿ ಬಹಳವಾಗಿ ಕಾಡಿತ್ತು. 

ಆದರೂ ಸ್ಕೂಬಾ ಡೈವಿಂಗ್ ಒಂಥರಾ ವಿಭಿನ್ನ ಅನುಭವವನ್ನು ಕೊಟ್ಟಿದ್ದು ಮಾತ್ರ ಸುಳ್ಳಲ್ಲ. ಏನಾದರೂ ಹೊಸತನ್ನು ಮಾಡಬೇಕು ಎಂಬ ಬಯಕೆಯೂ ತಣಿದಿತ್ತು. ಆದರೆ ಎಲ್ಲೋ ಒಂದು ಅವ್ಯಕ್ತ ಭಯದಿಂದ ಸರಿಯಾಗಿ ಸ್ಕೂಬಾ ಡೈವಿಂಗ್ ಮಾಡಲಾಗಲಿಲ್ಲ ಎಂಬ ಬೇಜಾರೂ ಕಾಡಿತ್ತು. 



ಬೋಟ್ ಮೇಲೆ ನಿಂತು ಸಮುದ್ರ ಹಾಗೂ ಸೂರ್ಯನ ಕಿರಣಗಳನ್ನು ಆಸ್ವಾದಿಸುತ್ತಾ ನಿಂತೆ. ಸ್ವಲ್ಪ ಸಮಯದ ನಂತರ ಮತ್ತೆ ಮುರುಡೇಶ್ವರದ ಕಡೆಗೆ ಬೋಟ್ ಹೊರಟಿತ್ತು. ಅಲ್ಲಿಗೆ ನೇತ್ರಾಣಿ ದ್ವೀಪಕ್ಕೆ ವಿದಾಯ ಹೇಳಿ ಚಳಿಯಲ್ಲಿ ನಡುಗುತ್ತಾ ಬೋಟ್ ಅಲೆಗಳ ಹೊಡೆತಕ್ಕೆ ಸಿಕ್ಕಿ ಅಲುಗಾಡುತ್ತಾ ಸಾಗಿದಂತೆ ನಮ್ಮ ಪಯಣವೂ ಸಾಗಿತ್ತು. 


Tuesday, November 14, 2023

ವಿದಾಯ ಪತ್ರ


ಆತ್ಮೀಯ ವಿದ್ಯಾರ್ಥಿಗಳೇ, ನಿಮ್ಮ ಬದುಕಿನ ಅತ್ಯಂತ ಪ್ರಮುಖವಾದ ಘಟ್ಟ ಪದವಿ ಹಂತದ ಶಿಕ್ಷಣ ಮುಗಿಸಿ ವಾಸ್ತವವಾದ ಬದುಕಿನ ಕಡೆಗೆ ಹೆಜ್ಜೆ ಇಡುತ್ತಿರುವ ನಿಮಗೆಲ್ಲರಿಗೂ ಶುಭವಾಗಲಿ. ಅನಿವಾರ್ಯ ಕಾರಣಗಳಿಂದಾಗಿ ನಾನು ನಿಮ್ಮೆಲ್ಲರನ್ನು ಕುರಿತು ಮಾತನಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ಆದರೆ, ನಾನು ಹೇಳಲೇಬೇಕೆನಿಸಿದ ವಿದಾಯದ ಮಾತುಗಳನ್ನು ಈ ಮೂಲಕ ಹೇಳುತ್ತಿದ್ದೇನೆ. ಕೊರೊನಾದಂತಹ ಕೆಟ್ಟ ಕಾಲಘಟ್ಟದಲ್ಲಿ ನಾವೆಲ್ಲರೂ ಭೆಟಿ ಮಾಡಬೇಕಾಯಿತು. ಆದರೆ ಸಮಯ ಹಾಗೆಯೇ ಇರಲಿಲ್ಲ; ಬದಲಾಯಿತು. ಕತ್ತಲು ಕವಿದು ಬೆಳಕಿನ ಕಿರಣಗಳು ಒಂದೊಂದಾಗಿ ಕಾಣಿಸಿಕೊಳ್ಳತೊಡಗಿತು. ಬದುಕು ಸಹಜ ಸ್ಥಿತಿಯತ್ತ ಮರಳಿತು. ನಮ್ಮ ಪ್ರಯಾಣವೂ ಸಾಗುತ್ತಲೇ ಬಂದು, ಅಂತಿಮವಾಗಿ ಇಂದು ಇಲ್ಲಿಗೆ ನಿಂತಿದೆ. ಆರಂಬದ ಜೊತೆಗೆ ಅಂತ್ಯವೂ ಇರುತ್ತದೆ. ಹಾಗೆಂದ ಮಾತ್ರಕ್ಕೆ ಹೊಸ ಆರಂಭವೇ ಇಲ್ಲವೆಂದಲ್ಲ.

ಪದವಿ ಶಿಕ್ಷಣ ಮುಗಿದಿದೆ, ಇಂದಿನಿಂದ ನಿಮ್ಮ ಬದುಕಿನ ನಿಜವಾದ ಪ್ರಯಾಣ ಪ್ರಾರಂಭವಾಗುತ್ತಿದೆ. ಇದುವರೆಗೆ ಕಾಣದ ಲೋಕವೊಂದು ನಿಮಗೆ ಇನ್ನು ಮುಂದಿನ ದಿನಗಳಲ್ಲಿ ತೆರೆದುಕೊಳ್ಳಲಿದೆ. ಅದಕ್ಕಾಗಿಯೇ ಈ ಮೂರು ವರ್ಷದ ಸಿದ್ಧತೆ. ಸಿದ್ಧತೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ನಿಮಗೆ ನೀವೇ ಆತ್ಮಾವಲೋಕನ ಮಾಡಿಕೊಳ್ಳಿ. ಆದರೆ ನನ್ನ ನಂಬಿಕೆ ಎಂದಿಗೂ ಬದುಕು ಎಂಬ ಕಟ್ಟಡಕ್ಕೆ ಪದವಿ ಶಿಕ್ಷಣ ಎಂದಿಗೂ ಅಡಿಪಾಯ ಇದ್ದ ಹಾಗೆ. ಅಡಿಪಾಯ ಭದ್ರವಾಗಿದ್ದಷ್ಟು ಮಾತ್ರವೇ ಕಟ್ಟಡ ಸುಭದ್ರವಾಗಿರಲು ಸಾಧ್ಯ. ಹಾಗಾಗಿ ಅದು ಹೆಚ್ಚು ಶಿಸ್ತುಬದ್ಧವಾಗಿ, ವ್ಯವಸ್ಥಿತವಾಗಿರಬೇಕು ಎಂಬುದು ನನ್ನ ಧೋರಣೆ.

ಶಿಕ್ಷಣ ಕೇವಲ ಕಲಿಕೆಯಷ್ಟೇ ಅಲ್ಲ, ಅರ್ಥೈಸಿಕೊಳ್ಳುವಿಕೆ, ಅರಿವಿನ ಮಟ್ಟದ ಸಧಾರಣೆಯೂ ಆಗಬೇಕು. ಅದು ಆಗುವುದು ಪದವಿ ಹಂತದ ಶಿಕ್ಷಣದಲ್ಲಿ ಮಾತ್ರ. ಪದವಿ ಪೂರೈಸಿದೆವು ಎಂದರೆ ಅದು ಕೇವಲ ಮುಂದಿನ ಹಂತದ ಶಿಕ್ಷಣಕ್ಕೆ ಮಾತ್ರ ರಹದಾರಿಯಲ್ಲ; ಇಡೀ ಬದುಕಿನ ಪಯಣಕ್ಕೆ ರಹದಾರಿ. ಹಾಗಾಗಿ ಮುಂದೆ ಬರುವ ಎಲ್ಲಾ ಕಷ್ಟ, ನೋವು, ದುಃಳ, ಸಂತೋಷ, ನಗು ಎಲ್ಲದಕ್ಕೂ ಈ ಹಂತದ ಶಿಕ್ಷಣವೇ ಅಡಿಪಾಯ ಎಂಬುದು ನನ್ನ ಬಲವಾದ ನಂಬಿಕೆ. ಅದೇ ಕಾರಣಕ್ಕಾಗಿ ನಿಮ್ಮ ಮುಂದಿನ ಬದುಕಿಗೆ ನಿಮ್ಮನ್ನು ತಯಾರಿ ಆಡಲು ನಾನು ಬಹಳ ಕಟುವಾಗಿ ನಡೆದುಕೊಳ್ಳಬೇಕಾಯಿತು. ಆಗ ಮಾತ್ರ ಅದು ನಮ್ಮ ಸುಪ್ತ ಮನಸ್ಸಿನಲ್ಲಿ ಆಳವಾಗಿ ಬೇರೂರಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ನಾಣು ಯಾವಾಗಲೂ ನಿಮ್ಮ ಜೊತೆಗೆ ಕಠಿಣವಾಗಿ ನಡೆದುಕೊಳ್ಳಬೇಕಾಯಿತು.

ಶಿಕ್ಷಕ ಕೇವಲ ಉಪನ್ಯಾಸಕನಷ್ಟೇ ಅಲ್ಲ; ಅವನೊಬ್ಬ ಬದುಕಿನ ದಾರಿ ತೋರಿಸುವವನು ಎಂಬುದನ್ನು ನನ್ನ ಗುರುಗಳು ನನಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವರ ಮತುಗಳನ್ನು, ಅವರ ಪಾಠಗಳನ್ನು ಹಾಗೂ ಬದುಕಿನಲ್ಲಿ ಗುರುಗಳ ಮುಖೇಣ ಕಲಿತದ್ದನ್ನು ಮುಂದಿನ ಪೀಳಿಗೆಗೆ ರವಾನೆ ಮಾಡುವ ಪೋಸ್ಟ್‌ ಮ್ಯಾನ್‌ ಕೆಲಸ ಮಾಡುದಕ್ಕಷ್ಟೇ ನನ್ನ ಕರ್ತವ್ಯ ಸೀಮಿತ ಎಂದು ಭಾವಿಸಿದ್ದೇನೆ. ಈ ವೃತ್ತಿಯಲ್ಲಿ ನಾನು ಅದೆಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇನೆ ಅಥವಾ ನಿಮ್ಮ ನಿರೀಕ್ಷೆಗೆ ಅದೆಷ್ಟು ನ್ಯಾಯ ಒದಗಿಸಿದ್ದೇನೆ ಎಂಬುದು ಈಗಲೂ ನನಗೆ ತಿಳಿದಿಲ್ಲ. ಆ ಮಟ್ಟಿಗೆ ದೊಡ್ಡ ಪ್ರಶ್ನೆ ಯಾವಾಗಲೂ ನನಗೆ ಕಾಡುತ್ತಲೇ ಇರುತ್ತದೆ. ಬಹುಶ ಅಷ್ಟರಮಟ್ಟಿಗೆ ಆತ್ಮಾವಲೋಕನ ನನಗೂ ಬೇಕಿದೆ. ಆಗ ಮಾತ್ರವೇ ನಾನೂ ಕೂಡ ಜೀವಂತವಾಗಿರುತ್ತೇನೆ ಎನಿಸುತ್ತದೆ.

ಒಂದಷ್ಟು ಕಠಿಣ ನಿಯಮ, ಬದ್ಧತೆ, ಶಿಸ್ತು, ಕ್ರಮಬದ್ಧತೆಗೆ ಮೊದಲ ಆದ್ಯತೆ ನೀಡುವುಸು ನನ್ನ ಸ್ವಭಾವ. ವೃತ್ತಿಯಲ್ಲೀ ಇದಕ್ಕೆ ಮಹತ್ವ ಇದ್ದೇ ಇರುತ್ತದೆ ನನ್ನ ಮಟ್ಟಿಗೆ. ಕಲಿಕೆ ಯಾವಾಗಲೂ ಕ್ರಮಬದ್ಧ, ವ್ಯವಸ್ಥಿತ ಹಾಗೂ ಶಿಸ್ತಿನಿಂದ ಕೂಡಿರಬೇಕು. ಇದು ನಮ್ಮ ಬದುಕಿಗೂ ಅಷ್ಟೇ ಮುಖ್ಯ ಎಂಬುದು ನನ್ನ ವಾದ. ಇದರಿಂದ ಸಾಕಷ್ಟು ಮನಸ್ತಾಪ, ಅಸಮಧಾನ, ಅಸಹಕಾರ ಎಲ್ಲವೂ ಎದುರಾಗಿದೆ. ಆದರೆ ಬದುಕು ನನಗಿಂತಲೂ ಕೆಟ್ಟ ಮೇಷ್ಟು ಎಂಬುದನ್ನು ಅರ್ಥ ಮಾಡಿಸುವುದಷ್ಟೇ ನನ್ನ ಉದ್ದೇಶವಾಗಿತ್ತು.

ಅಂತಹ ಕೆಟ್ಟ ಪರಿಸ್ಥಿತಿಗಳಿಗೂ ನೀವುಗಳು ಜಗ್ಗದೇ, ಕುಗ್ಗದೇ ಮುಂದೆ ಸಾಗಬೇಕು. ಅದಕ್ಕಾಗಿ ಈ ಪೂರ್ವತಯಾರಿ. ಪದವಿ ಪಾಸಾದರೂ, ನಪಾಸಾದರೂ ಪರವಾಗಿಲ್ಲ. ಬದುಕಿನ ಪರೀಕ್ಷೆಯಲ್ಲಿ ನನ್ನ ಮಕ್ಕಳಾರೂ ನಪಾಸಾಗಬಾರದು ಎಂದೇ ನಿಮ್ಮನ್ನು ಮೂರು ವರ್ಷ ತಯಾರು ಮಾಡಿದೆ. ಆದರೆ ಅದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದೇನೆ ಎಂಬುದು ಇಂದಿಗೂ ನನಗೆ ಖಾತ್ರಿಯಿಲ್ಲ. ಮತ್ತೂ ಒಂದಷ್ಟು ಕಲಿಸಬೇಕಿತ್ತು; ಅದನ್ನು ಕಲಿಸು ಸಾಧ್ಯವೇ ಆಗಲಿಲ್ಲವೇನೋ ಎಂಬ ಸಣ್ಣ ಅಳುಕು ಇಂದಿಗೂ ಮನದ ಮೂಲೆಯಲ್ಲಿ ಹಾಗೆಯೇ ಉಳಿದುಬಿಟ್ಟಿದೆ.

ಕಳೆದ ಮೂರು ವರ್ಷಗಳಲ್ಲಿ ಕಲಿಯಬೇಕಾದದ್ದೆಲ್ಲವನ್ನೂ ಕಲಿಯಲು ಬಹುಶಃ ಸಾಕಷ್ಟು ಮಂದಿಗೆ ಸಾಧ್ಯವಾಗಿರಲಿಕ್ಕಿಲ್ಲ ಅಥವಾ ಕಲಿಸುವಲ್ಲಿ ನನ್ನ ವೈಫಲ್ಯದ ಪಾಲೂ ಇದೆ ಎಂಬುದು ಚೆನ್ನಾಗಿ ತಿಳಿದಿದೆ. ಅದಕ್ಕಾಗಿ ಸಾಕಷ್ಟು ಪಶ್ಚಾತ್ತಾಪವೂ ಇದೆ. ಆದರೆ, ಪದವಿ ಮುಗಿದ ಮಾತ್ರಕ್ಕೆ ಬದುಕೇ ಮುಗಿದಿಲ್ಲ ಅಥವಾ ಶಿಕ್ಷಣವೇ ಮುಗಿಯಲಿಲ್ಲ. ವಾಸ್ತವ ಶಿಕ್ಷಣ, ಕಲಿಕೆ ಎಲ್ಲವೂ ಇಲ್ಲಿಂದ ಆರಂಭವಾಗಲಿದೆ. ನಿಗದಿತ ಗುರಿಯಿಂದ ವಿಚಲಿತರಾಗಬೇಡಿ. ಅದದೆಷ್ಟೇ ಕಷ್ಟ, ನಿರಾಶೆ ಅದೇನೇ ಆಗಲಿ ಛಲದಿಂದ ಸಾಧಿಸಿ ಧಕ್ಕಿಸಿಕೊಳ್ಳಿ. ಅದೇ ನಿಜವಾದ ಯಶಸ್ಸು. ಶ್ರದ್ಧೆ, ಶಿಸ್ತು, ವ್ಯವಸ್ಥಿತ ಕಲಿಕೆ, ಕ್ರಮಬದ್ಧತೆ ಇವೆಲ್ಲವೂ ನಿಮ್ಮ ಬದುಕಿನ ಉಸಿರಾಗಿರಲಿ.



ಕೊನೆಯದಾಗಿ, ಶ್ರೀಮಾತೆ ಶಾರದಾದೇವಿ ಮತ್ತು ರಾಮಕೃಷ್ಣ ಪರಮಹಂಸರ ಮಾತಿನೊಂದಿಗೆ ವಿದಾಯದ ಪತ್ರಕ್ಕೆ ಕೊನೆ ಹಾಡುತ್ತಿದ್ದೇನೆ.

ಕಷ್ಟಗಳನ್ನು ಪರಮಾತ್ಮನ ಕರುಣೆಯ ಕುರುಹು ಎಂದು ತಿಳಿ

ಸುಖಕ್ಕೆ ಮನಸೋಲಬೇಡ

ಕಷ್ಟಗಳು ಬರದೇ ನಿನ್ನ ಕೆಚ್ಚು ಕೆರಳದು

ಕೆಚ್ಚು ಕೆರಳದೆ ಸಾಧನೆ ನಡೆಯದು-ಶ್ರೀಮಾತೆ ಶಾರದಾ ದೇವಿ

 

ನಾವೆಲ್ಲರೂ ಬದುಕಿನ ನಿರಂತರ ವಿದ್ಯಾರ್ಥಿಗಳು. ಕಲಿಕೆ ನಿಂತ ದಿನವೇ ಮುನುಷ್ಯಮ ಮರಣ-ರಾಮಕೃಷ್ಣ ಪರಮಹಂಸ

ಶುಭವಾಗಲಿ, ಒಳಿತಾಗಲಿ.

ಧನ್ಯವಾದಗಳು, ಕಳೆದ ಮೂರು ವರ್ಷಗಳಿಂದ ನನ್ನನ್ನು ಸಹಿಸಿಕೊಂಡು ಜೊತೆ ಜೊತೆಗೆ ಹೆಜ್ಜೆ ಹಾಕಿದ್ದಕ್ಕೆ. ನಿಮ್ಮ ಜೊತಗೆ ನನಗೂ ಪಾಠ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ, ನಿರಂತರ ಕಲಿಕೆಗೆ ದಾರಿ ಮಾಡಿಕೊಟ್ಟು ಜೀವಂತವಾಗಿಟ್ಟಿರುವುದಕ್ಕೆ.


ವ್ಯಕ್ತಿಯ ಬದುಕಿನ ಅಸ್ಥಿತ್ವಕ್ಕೆ ಮದುವೆ, ಮಕ್ಕಳಷ್ಟೇ ಮಾನದಂಡವೇ


ವ್ಯಕ್ತಿಯ ಅಸ್ಥಿತ್ವಕ್ಕೆ ಮದುವೆ, ಮಕ್ಕಳು, ಸಂಸಾರವಷ್ಟೇ ಮಾನದಂಡವಲ್ಲ ಎಂಬ ಮಾತಿಗೆ ಪೂರಕವೆಂಬಂತೆ ಸ್ವತಂತ್ರವಾದ ಬದುಕು ಕಟ್ಟಿಕೊಂಡವಳು ನಾನು. ನನ್ನಷ್ಟಕ್ಕೆ ನಾನು ಖುಷಿಯಿಂದಲೇ ಬದುಕುತ್ತಿದ್ದೇನೆ. ಆದರೆ ಇತ್ತೀಚೆಗೆ ಸಂಭವಿಸಿದ ಕೆಲ ಘಟನೆಗಳು ನನ್ನನ್ನು ಒಂದಷ್ಟು ಆಲೋಚನೆಗೆ ದೂಡಿದ್ದು ಮಾತ್ರ ಸುಳ್ಳಲ್ಲ.
ಘಟನೆ-1
ಜಗತ್ತು ಬಹಳ ವೇಗವಾಗಿ ಓಡುತ್ತಲೇ ಇದೆ. ಕೊನೆ ಮೊದಲಿಲ್ಲದ ಓಟ ಇದು. ನಮಗೆ ಬೇಕೋ ಬೇಡವೋ ನಾವು ಎಲ್ಲರ ಜೊತೆ ಸೇರಿಕೊಂಡು ಓಡಲೇಬೇಕು, ಇಲ್ಲವಾದಲ್ಲಿ, ಕನಿಷ್ಠ ನಡೆಯಬೇಕು. ಎರಡೂ ಮಾಡದಿದ್ದರೆ ಇಲ್ಲಿರುವುದು ವ್ಯರ್ಥ ಎನ್ನುವಷ್ಟರ ಮಟ್ಟಿಗೆ ಬದಲಾಗುತ್ತಿದೆ. ಬದುಕಿನಲ್ಲಿ ಕೆಲವೊಮ್ಮೆ ಒಮ್ಮೆ ನಿಂತು ಸಾವರಿಸಿಕೊಂಡರೆ ಮುಂದೆ ಬಹು ದೂರ ಸಾಗಲು ಹುಮ್ಮಸ್ಸು ಬರುತ್ತದೆ. ಅದಕ್ಕಾದರೂ ಬ್ರೇಕ್‌ ತಗೋಬೇಕು ಅನ್ನುತ್ತಾರೆ ತಿಳಿದವರು.
ಒಮ್ಮೆ ಹೀಗಾಯಿತು. ನಿರಂತರ ಕೆಲಸದ ಒತ್ತಡದಿಂದ ಒಂದಷ್ಟು ಬ್ರೇಕ್‌ ತಗೋಬೇಕು ಅಂತಾ ನಿರ್ಧರಿಸಿ ಓಟದಿಂದ ಹಿಂದೆ ಸರಿಯುವುದಾಗಿ ಆತ ಘೋಷಿಸಿದ. ಸಹಜವಾಗಿ ಇದು ಉಳಿದೆಲ್ಲಾ ಸಹೋದ್ಯೋಗಿಗಳಿಗೆ ಆಘಾತವಾಯಿತು. ಕೆಲವರು ಅಯ್ಯೋ ಪಾಪ ಅವನಿಗೆ ಮದುವೆಯಾಗಿದೆ, ಸಂಸಾರವಿದೆ, ಮಕ್ಕಳಿದ್ದಾರೆ, ಬದುಕಿನಲ್ಲಿ ಸಾಕಷ್ಟು ಜವಾಬ್ದಾರಿಗಳಿವೆ. ಬಹಳ ಚಿಕ್ಕ ವಯಸ್ಸಿನಲ್ಲಿ ವಿಶ್ರಾಂತಿಗಾಗಿ ತೆರಳುತ್ತಿದ್ದಾನೆ ಎಂದು ಮರುಗಿದರು.
ಘಟನೆ-2
ಇತ್ತೀಚೆಗೆ ನನ್ನ ಗೆಳತಿಯೊಬ್ಬರು ಬಹಳ ನೋವಿನಿಂದಲೇ ಈ ಮಾತನ್ನು ಹೇಳಿದಳು. ನಾನು ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಹೆಚ್ಚು ಸಮಯ ಕೆಲಸದ ಸ್ಥಳದಲ್ಲೇ ನಿಲ್ಲುವಂತೆ ಹೇಳುತ್ತಾರೆ. ಅದೇ ಮತ್ತೊಬ್ಬರು ಮದುವೆಯಾಗಿದೆ, ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಅರ್ಧ ಗಂಟೆ ಮುಂಚಿತವಾಗಿಯೇ ಮನೆಗೆ ತೆರಳಲು ಅನುಮತಿ ನೀಡುತ್ತಾರೆ. ಹಾಗಾದರೆ ನನಗೆ ಬದುಕಿಲ್ಲವೇ. ಆಕೆ ಕೇಳಿದ ಪ್ರಶ್ನೆ ಸರಿಯಾಗಿಯೇ ಇತ್ತು. ಆದರೆ ಸೂಕ್ತ ಉತ್ತರ ಮಾತ್ರ ನನ್ನಲ್ಲಿ ಇರಲಿಲ್ಲ. ಏಕೆಂದರೆ ಅಂತಹದ್ದೇ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನೂ ಇದ್ದೆ. ಆಗಲೇ ನನ್ನ ಮನಸ್ಸು ಆ ಕುರಿತು ಆಲೋಚಿಸಲು ಮುಂದಾದದ್ದು. ಮದುವೆಯಾಗದೇ ಇದ್ದೀನಿ ಎಂದ ಮಾತ್ರಕ್ಕೆ ಜವಾಬ್ದಾರಿ ಇಲ್ಲವೇ ಅಥವಾ ನನ್ನದೇ ಬದುಕು ನಮಗಿಲ್ಲವೇ. ಮನೆ, ಕೆಲಸ, ಇದೆಲ್ಲದರ ಆಚೆಗೆ ನಮಗೆ ನಮ್ಮದೂ ಅಂತ ಏನೂ ಇಲ್ಲವೇ ಎಂದು ಕೇಳಿದಾಗಲೇ ನನಗೂ ಮನವರಿಕೆಯಾದದ್ದು ನನ್ನ ಪರಿಸ್ಥಿತಿಯೂ ಆಕೆಯದಕ್ಕಿಂತ ಭಿನ್ನವಾಗಿಲ್ಲ ಎಂದು.
ಬದುಕಿನಲ್ಲಿ ಮದುವೆ, ಮಕ್ಕಳಿದ್ದರೆ ಮಾತ್ರವೇ ಆತನಿಗೆ ಈ ಸಮಾಜದಲ್ಲಿ ಎಲ್ಲರಂತೆ ಬದುಕಲು ಹಕ್ಕಿರುವುದೇ. ಹಾಗಾದರೆ, ಮದುವೆಯಾಗದವರು ಅಥವಾ ಬೇರೆ ಬೇರೆಯಾಗಿರುವ ಅಥವಾ ಒಬ್ಬರೇ ಇರುವುದು ಈ ಸಮಾಜದ ಪ್ರಕಾರ ಅಪರಾಧವೇ ಎಂಬ ಪ್ರಶ್ನೆ ನನ್ನನ್ನು ಬಹಳವಾಗಿ ಕಾಡುತ್ತಿದೆ. ಮದುವೆ, ಮಕ್ಕಳೇ ಬದುಕಿನ ಜವಾಬ್ದಾರಿಗೆ ಮಾನದಂಡ ಎಂದು ಗುರುತು ಮಾಡಿದವರು ಯಾರು. ಮದುವೆ, ಮಕ್ಕಳನ್ನು ಹಡೆದ ಮೇಲೂ ಮೂರು ಕಾಸಿಗೂ ಪ್ರಯೋಜನವಿಲ್ಲದ ಅದೆಷ್ಟು ಜನರು ನಮ್ಮ ಮುಂದೆಯೇ ಓಡಾಡುತ್ತಿರುವಾಗ ಅದು ಹೇಗೆ ಹೀಗೆಲ್ಲಾ ಪೂರ್ವಾಗ್ರಹಗಳನ್ನು ಇಟ್ಟುಕೊಂಡು ಬದುಕುವುದು ತಿಳಿಯುತ್ತಿಲ್ಲ.