ಆತ್ಮೀಯ ವಿದ್ಯಾರ್ಥಿಗಳೇ, ನಿಮ್ಮ ಬದುಕಿನ ಅತ್ಯಂತ ಪ್ರಮುಖವಾದ ಘಟ್ಟ ಪದವಿ ಹಂತದ ಶಿಕ್ಷಣ ಮುಗಿಸಿ ವಾಸ್ತವವಾದ ಬದುಕಿನ ಕಡೆಗೆ ಹೆಜ್ಜೆ ಇಡುತ್ತಿರುವ ನಿಮಗೆಲ್ಲರಿಗೂ ಶುಭವಾಗಲಿ. ಅನಿವಾರ್ಯ ಕಾರಣಗಳಿಂದಾಗಿ ನಾನು ನಿಮ್ಮೆಲ್ಲರನ್ನು ಕುರಿತು ಮಾತನಾಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ಆದರೆ, ನಾನು ಹೇಳಲೇಬೇಕೆನಿಸಿದ ವಿದಾಯದ ಮಾತುಗಳನ್ನು ಈ ಮೂಲಕ ಹೇಳುತ್ತಿದ್ದೇನೆ. ಕೊರೊನಾದಂತಹ ಕೆಟ್ಟ ಕಾಲಘಟ್ಟದಲ್ಲಿ ನಾವೆಲ್ಲರೂ ಭೆಟಿ ಮಾಡಬೇಕಾಯಿತು. ಆದರೆ ಸಮಯ ಹಾಗೆಯೇ ಇರಲಿಲ್ಲ; ಬದಲಾಯಿತು. ಕತ್ತಲು ಕವಿದು ಬೆಳಕಿನ ಕಿರಣಗಳು ಒಂದೊಂದಾಗಿ ಕಾಣಿಸಿಕೊಳ್ಳತೊಡಗಿತು. ಬದುಕು ಸಹಜ ಸ್ಥಿತಿಯತ್ತ ಮರಳಿತು. ನಮ್ಮ ಪ್ರಯಾಣವೂ ಸಾಗುತ್ತಲೇ ಬಂದು, ಅಂತಿಮವಾಗಿ ಇಂದು ಇಲ್ಲಿಗೆ ನಿಂತಿದೆ. ಆರಂಬದ ಜೊತೆಗೆ ಅಂತ್ಯವೂ ಇರುತ್ತದೆ. ಹಾಗೆಂದ ಮಾತ್ರಕ್ಕೆ ಹೊಸ ಆರಂಭವೇ ಇಲ್ಲವೆಂದಲ್ಲ.
ಪದವಿ ಶಿಕ್ಷಣ ಮುಗಿದಿದೆ, ಇಂದಿನಿಂದ ನಿಮ್ಮ ಬದುಕಿನ ನಿಜವಾದ ಪ್ರಯಾಣ
ಪ್ರಾರಂಭವಾಗುತ್ತಿದೆ. ಇದುವರೆಗೆ ಕಾಣದ ಲೋಕವೊಂದು ನಿಮಗೆ ಇನ್ನು ಮುಂದಿನ ದಿನಗಳಲ್ಲಿ ತೆರೆದುಕೊಳ್ಳಲಿದೆ.
ಅದಕ್ಕಾಗಿಯೇ ಈ ಮೂರು ವರ್ಷದ ಸಿದ್ಧತೆ. ಸಿದ್ಧತೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ನಿಮಗೆ ನೀವೇ ಆತ್ಮಾವಲೋಕನ
ಮಾಡಿಕೊಳ್ಳಿ. ಆದರೆ ನನ್ನ ನಂಬಿಕೆ ಎಂದಿಗೂ ಬದುಕು ಎಂಬ ಕಟ್ಟಡಕ್ಕೆ ಪದವಿ ಶಿಕ್ಷಣ ಎಂದಿಗೂ ಅಡಿಪಾಯ
ಇದ್ದ ಹಾಗೆ. ಅಡಿಪಾಯ ಭದ್ರವಾಗಿದ್ದಷ್ಟು ಮಾತ್ರವೇ ಕಟ್ಟಡ ಸುಭದ್ರವಾಗಿರಲು ಸಾಧ್ಯ. ಹಾಗಾಗಿ ಅದು
ಹೆಚ್ಚು ಶಿಸ್ತುಬದ್ಧವಾಗಿ, ವ್ಯವಸ್ಥಿತವಾಗಿರಬೇಕು ಎಂಬುದು ನನ್ನ ಧೋರಣೆ.
ಶಿಕ್ಷಣ ಕೇವಲ ಕಲಿಕೆಯಷ್ಟೇ ಅಲ್ಲ, ಅರ್ಥೈಸಿಕೊಳ್ಳುವಿಕೆ, ಅರಿವಿನ
ಮಟ್ಟದ ಸಧಾರಣೆಯೂ ಆಗಬೇಕು. ಅದು ಆಗುವುದು ಪದವಿ ಹಂತದ ಶಿಕ್ಷಣದಲ್ಲಿ ಮಾತ್ರ. ಪದವಿ ಪೂರೈಸಿದೆವು
ಎಂದರೆ ಅದು ಕೇವಲ ಮುಂದಿನ ಹಂತದ ಶಿಕ್ಷಣಕ್ಕೆ ಮಾತ್ರ ರಹದಾರಿಯಲ್ಲ; ಇಡೀ ಬದುಕಿನ ಪಯಣಕ್ಕೆ ರಹದಾರಿ.
ಹಾಗಾಗಿ ಮುಂದೆ ಬರುವ ಎಲ್ಲಾ ಕಷ್ಟ, ನೋವು, ದುಃಳ, ಸಂತೋಷ, ನಗು ಎಲ್ಲದಕ್ಕೂ ಈ ಹಂತದ ಶಿಕ್ಷಣವೇ ಅಡಿಪಾಯ
ಎಂಬುದು ನನ್ನ ಬಲವಾದ ನಂಬಿಕೆ. ಅದೇ ಕಾರಣಕ್ಕಾಗಿ ನಿಮ್ಮ ಮುಂದಿನ ಬದುಕಿಗೆ ನಿಮ್ಮನ್ನು ತಯಾರಿ ಆಡಲು
ನಾನು ಬಹಳ ಕಟುವಾಗಿ ನಡೆದುಕೊಳ್ಳಬೇಕಾಯಿತು. ಆಗ ಮಾತ್ರ ಅದು ನಮ್ಮ ಸುಪ್ತ ಮನಸ್ಸಿನಲ್ಲಿ ಆಳವಾಗಿ
ಬೇರೂರಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ನಾಣು ಯಾವಾಗಲೂ ನಿಮ್ಮ ಜೊತೆಗೆ ಕಠಿಣವಾಗಿ ನಡೆದುಕೊಳ್ಳಬೇಕಾಯಿತು.
ಶಿಕ್ಷಕ ಕೇವಲ ಉಪನ್ಯಾಸಕನಷ್ಟೇ ಅಲ್ಲ; ಅವನೊಬ್ಬ ಬದುಕಿನ ದಾರಿ ತೋರಿಸುವವನು
ಎಂಬುದನ್ನು ನನ್ನ ಗುರುಗಳು ನನಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವರ ಮತುಗಳನ್ನು, ಅವರ ಪಾಠಗಳನ್ನು
ಹಾಗೂ ಬದುಕಿನಲ್ಲಿ ಗುರುಗಳ ಮುಖೇಣ ಕಲಿತದ್ದನ್ನು ಮುಂದಿನ ಪೀಳಿಗೆಗೆ ರವಾನೆ ಮಾಡುವ ಪೋಸ್ಟ್ ಮ್ಯಾನ್
ಕೆಲಸ ಮಾಡುದಕ್ಕಷ್ಟೇ ನನ್ನ ಕರ್ತವ್ಯ ಸೀಮಿತ ಎಂದು ಭಾವಿಸಿದ್ದೇನೆ. ಈ ವೃತ್ತಿಯಲ್ಲಿ ನಾನು ಅದೆಷ್ಟರಮಟ್ಟಿಗೆ
ಯಶಸ್ವಿಯಾಗಿದ್ದೇನೆ ಅಥವಾ ನಿಮ್ಮ ನಿರೀಕ್ಷೆಗೆ ಅದೆಷ್ಟು ನ್ಯಾಯ ಒದಗಿಸಿದ್ದೇನೆ ಎಂಬುದು ಈಗಲೂ ನನಗೆ
ತಿಳಿದಿಲ್ಲ. ಆ ಮಟ್ಟಿಗೆ ದೊಡ್ಡ ಪ್ರಶ್ನೆ ಯಾವಾಗಲೂ ನನಗೆ ಕಾಡುತ್ತಲೇ ಇರುತ್ತದೆ. ಬಹುಶ ಅಷ್ಟರಮಟ್ಟಿಗೆ
ಆತ್ಮಾವಲೋಕನ ನನಗೂ ಬೇಕಿದೆ. ಆಗ ಮಾತ್ರವೇ ನಾನೂ ಕೂಡ ಜೀವಂತವಾಗಿರುತ್ತೇನೆ ಎನಿಸುತ್ತದೆ.
ಒಂದಷ್ಟು ಕಠಿಣ ನಿಯಮ, ಬದ್ಧತೆ, ಶಿಸ್ತು, ಕ್ರಮಬದ್ಧತೆಗೆ ಮೊದಲ ಆದ್ಯತೆ
ನೀಡುವುಸು ನನ್ನ ಸ್ವಭಾವ. ವೃತ್ತಿಯಲ್ಲೀ ಇದಕ್ಕೆ ಮಹತ್ವ ಇದ್ದೇ ಇರುತ್ತದೆ ನನ್ನ ಮಟ್ಟಿಗೆ. ಕಲಿಕೆ
ಯಾವಾಗಲೂ ಕ್ರಮಬದ್ಧ, ವ್ಯವಸ್ಥಿತ ಹಾಗೂ ಶಿಸ್ತಿನಿಂದ ಕೂಡಿರಬೇಕು. ಇದು ನಮ್ಮ ಬದುಕಿಗೂ ಅಷ್ಟೇ ಮುಖ್ಯ
ಎಂಬುದು ನನ್ನ ವಾದ. ಇದರಿಂದ ಸಾಕಷ್ಟು ಮನಸ್ತಾಪ, ಅಸಮಧಾನ, ಅಸಹಕಾರ ಎಲ್ಲವೂ ಎದುರಾಗಿದೆ. ಆದರೆ ಬದುಕು
ನನಗಿಂತಲೂ ಕೆಟ್ಟ ಮೇಷ್ಟು ಎಂಬುದನ್ನು ಅರ್ಥ ಮಾಡಿಸುವುದಷ್ಟೇ ನನ್ನ ಉದ್ದೇಶವಾಗಿತ್ತು.
ಅಂತಹ ಕೆಟ್ಟ ಪರಿಸ್ಥಿತಿಗಳಿಗೂ ನೀವುಗಳು ಜಗ್ಗದೇ, ಕುಗ್ಗದೇ ಮುಂದೆ
ಸಾಗಬೇಕು. ಅದಕ್ಕಾಗಿ ಈ ಪೂರ್ವತಯಾರಿ. ಪದವಿ ಪಾಸಾದರೂ, ನಪಾಸಾದರೂ ಪರವಾಗಿಲ್ಲ. ಬದುಕಿನ ಪರೀಕ್ಷೆಯಲ್ಲಿ
ನನ್ನ ಮಕ್ಕಳಾರೂ ನಪಾಸಾಗಬಾರದು ಎಂದೇ ನಿಮ್ಮನ್ನು ಮೂರು ವರ್ಷ ತಯಾರು ಮಾಡಿದೆ. ಆದರೆ ಅದರಲ್ಲಿ ಸಂಪೂರ್ಣವಾಗಿ
ಯಶಸ್ವಿಯಾಗಿದ್ದೇನೆ ಎಂಬುದು ಇಂದಿಗೂ ನನಗೆ ಖಾತ್ರಿಯಿಲ್ಲ. ಮತ್ತೂ ಒಂದಷ್ಟು ಕಲಿಸಬೇಕಿತ್ತು; ಅದನ್ನು
ಕಲಿಸು ಸಾಧ್ಯವೇ ಆಗಲಿಲ್ಲವೇನೋ ಎಂಬ ಸಣ್ಣ ಅಳುಕು ಇಂದಿಗೂ ಮನದ ಮೂಲೆಯಲ್ಲಿ ಹಾಗೆಯೇ ಉಳಿದುಬಿಟ್ಟಿದೆ.
ಕಳೆದ ಮೂರು ವರ್ಷಗಳಲ್ಲಿ ಕಲಿಯಬೇಕಾದದ್ದೆಲ್ಲವನ್ನೂ ಕಲಿಯಲು ಬಹುಶಃ
ಸಾಕಷ್ಟು ಮಂದಿಗೆ ಸಾಧ್ಯವಾಗಿರಲಿಕ್ಕಿಲ್ಲ ಅಥವಾ ಕಲಿಸುವಲ್ಲಿ ನನ್ನ ವೈಫಲ್ಯದ ಪಾಲೂ ಇದೆ ಎಂಬುದು
ಚೆನ್ನಾಗಿ ತಿಳಿದಿದೆ. ಅದಕ್ಕಾಗಿ ಸಾಕಷ್ಟು ಪಶ್ಚಾತ್ತಾಪವೂ ಇದೆ. ಆದರೆ, ಪದವಿ ಮುಗಿದ ಮಾತ್ರಕ್ಕೆ
ಬದುಕೇ ಮುಗಿದಿಲ್ಲ ಅಥವಾ ಶಿಕ್ಷಣವೇ ಮುಗಿಯಲಿಲ್ಲ. ವಾಸ್ತವ ಶಿಕ್ಷಣ, ಕಲಿಕೆ ಎಲ್ಲವೂ ಇಲ್ಲಿಂದ ಆರಂಭವಾಗಲಿದೆ.
ನಿಗದಿತ ಗುರಿಯಿಂದ ವಿಚಲಿತರಾಗಬೇಡಿ. ಅದದೆಷ್ಟೇ ಕಷ್ಟ, ನಿರಾಶೆ ಅದೇನೇ ಆಗಲಿ ಛಲದಿಂದ ಸಾಧಿಸಿ ಧಕ್ಕಿಸಿಕೊಳ್ಳಿ.
ಅದೇ ನಿಜವಾದ ಯಶಸ್ಸು. ಶ್ರದ್ಧೆ, ಶಿಸ್ತು, ವ್ಯವಸ್ಥಿತ ಕಲಿಕೆ, ಕ್ರಮಬದ್ಧತೆ ಇವೆಲ್ಲವೂ ನಿಮ್ಮ ಬದುಕಿನ
ಉಸಿರಾಗಿರಲಿ.
ಕೊನೆಯದಾಗಿ, ಶ್ರೀಮಾತೆ ಶಾರದಾದೇವಿ ಮತ್ತು ರಾಮಕೃಷ್ಣ ಪರಮಹಂಸರ ಮಾತಿನೊಂದಿಗೆ
ವಿದಾಯದ ಪತ್ರಕ್ಕೆ ಕೊನೆ ಹಾಡುತ್ತಿದ್ದೇನೆ.
ಕಷ್ಟಗಳನ್ನು ಪರಮಾತ್ಮನ ಕರುಣೆಯ ಕುರುಹು ಎಂದು ತಿಳಿ
ಸುಖಕ್ಕೆ ಮನಸೋಲಬೇಡ
ಕಷ್ಟಗಳು ಬರದೇ ನಿನ್ನ ಕೆಚ್ಚು ಕೆರಳದು
ಕೆಚ್ಚು ಕೆರಳದೆ ಸಾಧನೆ ನಡೆಯದು-ಶ್ರೀಮಾತೆ ಶಾರದಾ ದೇವಿ
ನಾವೆಲ್ಲರೂ ಬದುಕಿನ ನಿರಂತರ ವಿದ್ಯಾರ್ಥಿಗಳು. ಕಲಿಕೆ ನಿಂತ ದಿನವೇ
ಮುನುಷ್ಯಮ ಮರಣ-ರಾಮಕೃಷ್ಣ ಪರಮಹಂಸ
ಶುಭವಾಗಲಿ, ಒಳಿತಾಗಲಿ.
ಧನ್ಯವಾದಗಳು, ಕಳೆದ ಮೂರು ವರ್ಷಗಳಿಂದ ನನ್ನನ್ನು ಸಹಿಸಿಕೊಂಡು ಜೊತೆ
ಜೊತೆಗೆ ಹೆಜ್ಜೆ ಹಾಕಿದ್ದಕ್ಕೆ. ನಿಮ್ಮ ಜೊತಗೆ ನನಗೂ ಪಾಠ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ,
ನಿರಂತರ ಕಲಿಕೆಗೆ ದಾರಿ ಮಾಡಿಕೊಟ್ಟು ಜೀವಂತವಾಗಿಟ್ಟಿರುವುದಕ್ಕೆ.


