ವ್ಯಕ್ತಿಯ ಅಸ್ಥಿತ್ವಕ್ಕೆ ಮದುವೆ, ಮಕ್ಕಳು, ಸಂಸಾರವಷ್ಟೇ ಮಾನದಂಡವಲ್ಲ ಎಂಬ ಮಾತಿಗೆ ಪೂರಕವೆಂಬಂತೆ ಸ್ವತಂತ್ರವಾದ ಬದುಕು ಕಟ್ಟಿಕೊಂಡವಳು ನಾನು. ನನ್ನಷ್ಟಕ್ಕೆ ನಾನು ಖುಷಿಯಿಂದಲೇ ಬದುಕುತ್ತಿದ್ದೇನೆ. ಆದರೆ ಇತ್ತೀಚೆಗೆ ಸಂಭವಿಸಿದ ಕೆಲ ಘಟನೆಗಳು ನನ್ನನ್ನು ಒಂದಷ್ಟು ಆಲೋಚನೆಗೆ ದೂಡಿದ್ದು ಮಾತ್ರ ಸುಳ್ಳಲ್ಲ.
ಘಟನೆ-1
ಜಗತ್ತು ಬಹಳ ವೇಗವಾಗಿ ಓಡುತ್ತಲೇ ಇದೆ. ಕೊನೆ ಮೊದಲಿಲ್ಲದ ಓಟ ಇದು. ನಮಗೆ ಬೇಕೋ ಬೇಡವೋ ನಾವು ಎಲ್ಲರ ಜೊತೆ ಸೇರಿಕೊಂಡು ಓಡಲೇಬೇಕು, ಇಲ್ಲವಾದಲ್ಲಿ, ಕನಿಷ್ಠ ನಡೆಯಬೇಕು. ಎರಡೂ ಮಾಡದಿದ್ದರೆ ಇಲ್ಲಿರುವುದು ವ್ಯರ್ಥ ಎನ್ನುವಷ್ಟರ ಮಟ್ಟಿಗೆ ಬದಲಾಗುತ್ತಿದೆ. ಬದುಕಿನಲ್ಲಿ ಕೆಲವೊಮ್ಮೆ ಒಮ್ಮೆ ನಿಂತು ಸಾವರಿಸಿಕೊಂಡರೆ ಮುಂದೆ ಬಹು ದೂರ ಸಾಗಲು ಹುಮ್ಮಸ್ಸು ಬರುತ್ತದೆ. ಅದಕ್ಕಾದರೂ ಬ್ರೇಕ್ ತಗೋಬೇಕು ಅನ್ನುತ್ತಾರೆ ತಿಳಿದವರು.
ಒಮ್ಮೆ ಹೀಗಾಯಿತು. ನಿರಂತರ ಕೆಲಸದ ಒತ್ತಡದಿಂದ ಒಂದಷ್ಟು ಬ್ರೇಕ್ ತಗೋಬೇಕು ಅಂತಾ ನಿರ್ಧರಿಸಿ ಓಟದಿಂದ ಹಿಂದೆ ಸರಿಯುವುದಾಗಿ ಆತ ಘೋಷಿಸಿದ. ಸಹಜವಾಗಿ ಇದು ಉಳಿದೆಲ್ಲಾ ಸಹೋದ್ಯೋಗಿಗಳಿಗೆ ಆಘಾತವಾಯಿತು. ಕೆಲವರು ಅಯ್ಯೋ ಪಾಪ ಅವನಿಗೆ ಮದುವೆಯಾಗಿದೆ, ಸಂಸಾರವಿದೆ, ಮಕ್ಕಳಿದ್ದಾರೆ, ಬದುಕಿನಲ್ಲಿ ಸಾಕಷ್ಟು ಜವಾಬ್ದಾರಿಗಳಿವೆ. ಬಹಳ ಚಿಕ್ಕ ವಯಸ್ಸಿನಲ್ಲಿ ವಿಶ್ರಾಂತಿಗಾಗಿ ತೆರಳುತ್ತಿದ್ದಾನೆ ಎಂದು ಮರುಗಿದರು.
ಘಟನೆ-2
ಇತ್ತೀಚೆಗೆ ನನ್ನ ಗೆಳತಿಯೊಬ್ಬರು ಬಹಳ ನೋವಿನಿಂದಲೇ ಈ ಮಾತನ್ನು ಹೇಳಿದಳು. ನಾನು ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಹೆಚ್ಚು ಸಮಯ ಕೆಲಸದ ಸ್ಥಳದಲ್ಲೇ ನಿಲ್ಲುವಂತೆ ಹೇಳುತ್ತಾರೆ. ಅದೇ ಮತ್ತೊಬ್ಬರು ಮದುವೆಯಾಗಿದೆ, ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಅರ್ಧ ಗಂಟೆ ಮುಂಚಿತವಾಗಿಯೇ ಮನೆಗೆ ತೆರಳಲು ಅನುಮತಿ ನೀಡುತ್ತಾರೆ. ಹಾಗಾದರೆ ನನಗೆ ಬದುಕಿಲ್ಲವೇ. ಆಕೆ ಕೇಳಿದ ಪ್ರಶ್ನೆ ಸರಿಯಾಗಿಯೇ ಇತ್ತು. ಆದರೆ ಸೂಕ್ತ ಉತ್ತರ ಮಾತ್ರ ನನ್ನಲ್ಲಿ ಇರಲಿಲ್ಲ. ಏಕೆಂದರೆ ಅಂತಹದ್ದೇ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನೂ ಇದ್ದೆ. ಆಗಲೇ ನನ್ನ ಮನಸ್ಸು ಆ ಕುರಿತು ಆಲೋಚಿಸಲು ಮುಂದಾದದ್ದು. ಮದುವೆಯಾಗದೇ ಇದ್ದೀನಿ ಎಂದ ಮಾತ್ರಕ್ಕೆ ಜವಾಬ್ದಾರಿ ಇಲ್ಲವೇ ಅಥವಾ ನನ್ನದೇ ಬದುಕು ನಮಗಿಲ್ಲವೇ. ಮನೆ, ಕೆಲಸ, ಇದೆಲ್ಲದರ ಆಚೆಗೆ ನಮಗೆ ನಮ್ಮದೂ ಅಂತ ಏನೂ ಇಲ್ಲವೇ ಎಂದು ಕೇಳಿದಾಗಲೇ ನನಗೂ ಮನವರಿಕೆಯಾದದ್ದು ನನ್ನ ಪರಿಸ್ಥಿತಿಯೂ ಆಕೆಯದಕ್ಕಿಂತ ಭಿನ್ನವಾಗಿಲ್ಲ ಎಂದು.
ಬದುಕಿನಲ್ಲಿ ಮದುವೆ, ಮಕ್ಕಳಿದ್ದರೆ ಮಾತ್ರವೇ ಆತನಿಗೆ ಈ ಸಮಾಜದಲ್ಲಿ ಎಲ್ಲರಂತೆ ಬದುಕಲು ಹಕ್ಕಿರುವುದೇ. ಹಾಗಾದರೆ, ಮದುವೆಯಾಗದವರು ಅಥವಾ ಬೇರೆ ಬೇರೆಯಾಗಿರುವ ಅಥವಾ ಒಬ್ಬರೇ ಇರುವುದು ಈ ಸಮಾಜದ ಪ್ರಕಾರ ಅಪರಾಧವೇ ಎಂಬ ಪ್ರಶ್ನೆ ನನ್ನನ್ನು ಬಹಳವಾಗಿ ಕಾಡುತ್ತಿದೆ. ಮದುವೆ, ಮಕ್ಕಳೇ ಬದುಕಿನ ಜವಾಬ್ದಾರಿಗೆ ಮಾನದಂಡ ಎಂದು ಗುರುತು ಮಾಡಿದವರು ಯಾರು. ಮದುವೆ, ಮಕ್ಕಳನ್ನು ಹಡೆದ ಮೇಲೂ ಮೂರು ಕಾಸಿಗೂ ಪ್ರಯೋಜನವಿಲ್ಲದ ಅದೆಷ್ಟು ಜನರು ನಮ್ಮ ಮುಂದೆಯೇ ಓಡಾಡುತ್ತಿರುವಾಗ ಅದು ಹೇಗೆ ಹೀಗೆಲ್ಲಾ ಪೂರ್ವಾಗ್ರಹಗಳನ್ನು ಇಟ್ಟುಕೊಂಡು ಬದುಕುವುದು ತಿಳಿಯುತ್ತಿಲ್ಲ.

No comments:
Post a Comment