ಅದೊಂದು ದಿನ ಆತ್ಮೀಯ(ನಾನು ಅಂದುಕೊಂಡದ್ದು)ರೊಬ್ಬರು I cant be always be with you ಎಂದು ಹೇಳಿದ ಮಾತು ಈಗಲೂ ಕಿವಿಯಲ್ಲಿ ಸದ್ದು ಮಾಡುತ್ತಿದೆ. ಒಮ್ಮೆ ನಿಮ್ಮದೇ ಬದುಕಿನ ಪುಟಗಳನ್ನು
ತಿರುವಿ ಹಾಕಿ ನೋಡಿ, ನಿಮಗೂ ಹೀಗೊಂದು ಅನುಭವ ಆಗಿರಬಹುದು. ನಮ್ಮವರು, ಆತ್ಮೀಯರು, ಜೊತೆಗೆ ಎಂದಿಗೂ
ಇರುವವರು ಎಂಬೆಲ್ಲಾ ಭ್ರಮೆಯಲ್ಲೇ ಬದುಕು ನಡೆಸುತ್ತಿರುತ್ತೇವೆ. ಒಂದು ಕ್ಷಣ ಆ ಭ್ರಮೆ ಕಳಿಚಿದರೆ
ಸಾಕು ವಾಸ್ತವದ ಅರಿವಾಗುತ್ತದೆ. ಯಾರೂ ನಮ್ಮ ಜೊತೆಗೆ, ಎಂದಿಗೂ, ಎಲ್ಲಿಗೂ ಬರುವುದಿಲ್ಲ ಎಂಬುದು ಅರ್ಥವಾಗಿ
ಬಿಡುತ್ತದೆ.
ಬಹುಶಃ ಈ ವಾಸ್ತವ ಅರ್ಥವಾಗುವ ವೇಳೆಗೆ ನಾವುಗಳು ಅರ್ಧ ಆಯಸ್ಸನ್ನೇ ಕಳೆದುಕೊಂಡು ಬಿಟ್ಟಿರುತ್ತೇವೆ ಅಥವಾ ಬದುಕಿನಲ್ಲಿ ಸಾಕಷ್ಟು ನೋವು ಅನುಭವಿಸಿರುತ್ತೇವೆ. ಭ್ರಮೆ ಕಳಚಿದಾಕ್ಷಣವೇ ಭೂಮಿ ಬಾಯಿ ತೆರೆಯಬಾರದಾ ಎಂದೆನಿಸದೇ ಇರದು. ಯಾವುದೂ, ಯಾರೂ ಬದುಕಿನಲ್ಲಿ ಶಾಶ್ವತ ಅಲ್ಲ ಎಂಬ ವಾಸ್ತವಿಕತೆಯನ್ನು ಒಪ್ಪಿಕೊಂಡು ಬಿಟ್ಟರೆ ಬಹುಶಃ ಇಷ್ಟೊಂದು ನೋವಾಗುತ್ತಿರಲಿಲ್ಲ ಎಂದು ಆ ಹೊತ್ತಿಗೆ ಎನಿಸಿತ್ತದೆ. ನನಗೆ ನಾನೇ ಎಂಬ ಕಹಿ ಸತ್ಯದೊಂದಿಗೆ ಬದುಕು ನಡೆಸಲು ಪ್ರಾರಂಭವಾಗಿ ಅದೆಷ್ಟೋ ವರ್ಷಗಳು ಕಳೆದುಹೋಗಿದೆ. ಆದರೂ, ಒಮ್ಮೊಮ್ಮೆ ಮಾಯೆ ತನ್ನ ಜಾಲವನ್ನು ಬೀಸಿಯೇ ಬಿಡುತ್ತದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ ಎನ್ನುವಷ್ಟು ಗಟ್ಟಿಯಾಗಿ ಬಂಧಿಯಾಗಿಸುತ್ತದೆ.
ನನಗೂ ಅದೇ ಆದದ್ದು. ಹೀಗೊಂದು ಮಾತು ನನ್ನ ಬದುಕನ್ನೇ ಆಪೋಷನ ತೆಗೆದುಕೊಳ್ಳುತ್ತಿದೆ.
ʼಈ ಹಿಂದೆ ನಿನ್ನ ಜೊತೆ ಯಾರೂ ಇರಲಿಲ್ಲ, ಮುಂದೆಯೂ ಯಾರೂ ಇರುವುದಿಲ್ಲ,
ಅದೆಷ್ಟೇ ಪ್ರಯತ್ನ ಪಟ್ಟರೂ ಆರಕ್ಕೆ ಏರದ ಮೂರಕ್ಕೆ ಇಳಿಯದ ಹೊಟ್ಟೆ ಬಟ್ಟೆಗೆ ಕೊರತೆ ಇರದ ಬದುಕು ನಿನ್ನ
ಪಾಲಿಗೆ ಕಟ್ಟಿಟ್ಟ ಬುತ್ತಿʼ. ಬದುಕಿನಲ್ಲಿ ಬಹಳ
ದೊಡ್ಡ ದೊಡ್ಡ ಕನಸು ಕಂಡವಳು ನಾನು. ಸಣ್ಣ ಕನಸೇ ಅಪರಾಧ ಎನ್ನುವ ಕಲಾಂ ಅವರ ಮಾತನ್ನು ಚಾಚೂ ತಪ್ಪದೇ
ಪಾಲಿಸಿಕೊಂಡು ಬಂದವಳು. ಆದರೆ, ಈಗ ಈ ಮಾತು ಕೇಳಿ ಭೂಮಿ ಬಾಯಿ ತೆರೆಯಬಾರದಾ ಎನಿಸುತ್ತಿರುವುದು ಮಾತ್ರ
ಸುಳ್ಳಲ್ಲ.
ಯಾರೂ ಜೊತೆಗಿರದಾಗ ಒಬ್ಬಳೇ ನಿಂತು ಹೋರಾಡಿ ಬದುಕು ಕಟ್ಟಿಕೊಂಡ ನಾನು,
ಇಂದಿಗೂ ಯಾರ ಆಶ್ರಯವನ್ನೂ ಬಯಸುತ್ತಿಲ್ಲ. ಆದರೆ, ನಾನು ಮಾನಸಿಕವಾಗಿ ನಿನ್ನೊಂದಿಗಿದ್ದೇನೆ ಎಂಬ ಮಾತನ್ನು
ಕೇಳಬೇಕು ಎಂದು ಹಂಬಲಿಸಿದ್ದು ಮಾತ್ರ ಸುಳ್ಳಲ್ಲ. ಜೀವವೊಂದು ಆಸರೆ ಬಯಸುವುದು ಸಹಜವೇ ತಾನೇ. ನಾನೂ
ಹಾಗೆಯೇ ಹುಟ್ಟಿಸಿದ ಜೀವವೋ ಅಥವಾ ಜನ್ಮ ನೀಡಿದಾಕೆಯೋ ಜೊತೆಗೆ ನಿಲ್ಲುತ್ತಾಳೆ ಕೈ ಹಿಡಿದು ಮೇಲೆತ್ತುತ್ತಾರೆ
ಎಂದು ಬಯಸಿದ್ದ ಭ್ರಮೆಯೇ ಈಗ ಕಳಚಿ ಬಿದ್ದಿದೆ. ಅಕ್ಷರಶಃ ನನ್ನವರು ಯಾರೂ ಇಲ್ಲ ಎಂಬುದು ಅರಿವಿಗೆ
ಬಂದಿದೆ.
ಹೆಜ್ಜೆ ಮುಂದೆ ಸಾಗದೇ ನಿಂತಾಗ ಯಾರಾದರೂ ದಾರಿ ಹೋಕರು ದಾರಿ ತೋರಿಸಿಯಾರು
ಎಂದು ಸಹಜವಾಗಿ ಬಯಸಿದಂತೆ ಬಯಸಿದವಳು ನಾನು. ಆದರೆ ನನ್ನ ಬದುಕಿನಲ್ಲಿ ದಾರಿ, ದಾರಿಹೋಕರು ಯಾವುದೂ
ಇಲ್ಲವೆಂಬುದು ಅರಿವಾಗಿ ನಿಂತಲ್ಲೇ ನಿಂತು ಬಿಟ್ಟಿದ್ದೇನೆ. ಕಾಲು ಕೀಳಲೂ ಸಾಧ್ಯವಾಗದ ಸ್ಥಿತಿಯಲ್ಲಿ.
ಕಣ್ಣು ಹಾಯಿಸಿದ ಕಡೆಯೆಲ್ಲಾ ಬರೀ ಕತ್ತಲೆಯೇ ರಾಚುತ್ತಿದೆ. ಬೆಳಕಿನ ಒಂದೇ ಒಂದು ಅಂಶವೂ ಕಾಣುತ್ತಲೇ
ಇಲ್ಲ. ಕೂಗಲೂ ಸ್ವರವಿಲ್ಲದಂತಾಗಿ ಬಿದ್ದಿದ್ದೇನೆ. ಇದೇ ವೇಳೆ I cant be always be with you ಎಂಬ ಮಾತು ಕಿವಿಗೆ ಪದೆ ಪದೇ ಅಪ್ಪಳಿಸುತ್ತಿದೆ. ಹಾಗಾದರೆ, ಜೊತೆಗಿರುವುದು ಎಂದರೆ, ಅಷ್ಟೊಂದು
ದುಬಾರಿಯೇ ತಿಳಿಯುತ್ತಿಲ್ಲ. ಮನಸ್ಸು ಪಾತಾಳಕ್ಕೆ ಬಿದ್ದು ಮೇಲೆ ಬರಲೇ ಆಗದ ಸ್ಥಿತಿಯಲ್ಲಿ ಒದ್ದಾಡುತ್ತಿದೆ.
ಬದುಕಿನಲ್ಲಿ ಏನಾದರೂ ಪವಾಡವಾದೀತೇ ಎಂದು ಕಾಯುತ್ತಾ.













