Saturday, March 29, 2025

ಜೊತೆಗಿರುತ್ತೇನೆ ಎಂಬ ಮಾತು ಅಷ್ಟೊಂದು ದುಬಾರಿಯೇ

 


ಅದೊಂದು ದಿನ ಆತ್ಮೀಯ(ನಾನು ಅಂದುಕೊಂಡದ್ದು)ರೊಬ್ಬರು I cant be always be with you ಎಂದು ಹೇಳಿದ ಮಾತು ಈಗಲೂ ಕಿವಿಯಲ್ಲಿ ಸದ್ದು ಮಾಡುತ್ತಿದೆ. ಒಮ್ಮೆ ನಿಮ್ಮದೇ ಬದುಕಿನ ಪುಟಗಳನ್ನು ತಿರುವಿ ಹಾಕಿ ನೋಡಿ, ನಿಮಗೂ ಹೀಗೊಂದು ಅನುಭವ ಆಗಿರಬಹುದು. ನಮ್ಮವರು, ಆತ್ಮೀಯರು, ಜೊತೆಗೆ ಎಂದಿಗೂ ಇರುವವರು ಎಂಬೆಲ್ಲಾ ಭ್ರಮೆಯಲ್ಲೇ ಬದುಕು ನಡೆಸುತ್ತಿರುತ್ತೇವೆ. ಒಂದು ಕ್ಷಣ ಆ ಭ್ರಮೆ ಕಳಿಚಿದರೆ ಸಾಕು ವಾಸ್ತವದ ಅರಿವಾಗುತ್ತದೆ. ಯಾರೂ ನಮ್ಮ ಜೊತೆಗೆ, ಎಂದಿಗೂ, ಎಲ್ಲಿಗೂ ಬರುವುದಿಲ್ಲ ಎಂಬುದು ಅರ್ಥವಾಗಿ ಬಿಡುತ್ತದೆ.

ಬಹುಶಃ ಈ ವಾಸ್ತವ ಅರ್ಥವಾಗುವ ವೇಳೆಗೆ ನಾವುಗಳು ಅರ್ಧ ಆಯಸ್ಸನ್ನೇ ಕಳೆದುಕೊಂಡು ಬಿಟ್ಟಿರುತ್ತೇವೆ ಅಥವಾ ಬದುಕಿನಲ್ಲಿ ಸಾಕಷ್ಟು ನೋವು ಅನುಭವಿಸಿರುತ್ತೇವೆ. ಭ್ರಮೆ ಕಳಚಿದಾಕ್ಷಣವೇ ಭೂಮಿ ಬಾಯಿ ತೆರೆಯಬಾರದಾ ಎಂದೆನಿಸದೇ ಇರದು. ಯಾವುದೂ, ಯಾರೂ ಬದುಕಿನಲ್ಲಿ ಶಾಶ್ವತ ಅಲ್ಲ ಎಂಬ ವಾಸ್ತವಿಕತೆಯನ್ನು ಒಪ್ಪಿಕೊಂಡು ಬಿಟ್ಟರೆ ಬಹುಶಃ ಇಷ್ಟೊಂದು ನೋವಾಗುತ್ತಿರಲಿಲ್ಲ ಎಂದು ಆ ಹೊತ್ತಿಗೆ ಎನಿಸಿತ್ತದೆ. ನನಗೆ ನಾನೇ ಎಂಬ ಕಹಿ ಸತ್ಯದೊಂದಿಗೆ ಬದುಕು ನಡೆಸಲು ಪ್ರಾರಂಭವಾಗಿ ಅದೆಷ್ಟೋ ವರ್ಷಗಳು ಕಳೆದುಹೋಗಿದೆ. ಆದರೂ, ಒಮ್ಮೊಮ್ಮೆ ಮಾಯೆ ತನ್ನ ಜಾಲವನ್ನು ಬೀಸಿಯೇ ಬಿಡುತ್ತದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ ಎನ್ನುವಷ್ಟು ಗಟ್ಟಿಯಾಗಿ ಬಂಧಿಯಾಗಿಸುತ್ತದೆ. 


 

ನನಗೂ ಅದೇ ಆದದ್ದು. ಹೀಗೊಂದು ಮಾತು ನನ್ನ ಬದುಕನ್ನೇ ಆಪೋಷನ ತೆಗೆದುಕೊಳ್ಳುತ್ತಿದೆ. ʼಈ ಹಿಂದೆ ನಿನ್ನ ಜೊತೆ ಯಾರೂ ಇರಲಿಲ್ಲ, ಮುಂದೆಯೂ ಯಾರೂ ಇರುವುದಿಲ್ಲ, ಅದೆಷ್ಟೇ ಪ್ರಯತ್ನ ಪಟ್ಟರೂ ಆರಕ್ಕೆ ಏರದ ಮೂರಕ್ಕೆ ಇಳಿಯದ ಹೊಟ್ಟೆ ಬಟ್ಟೆಗೆ ಕೊರತೆ ಇರದ ಬದುಕು ನಿನ್ನ ಪಾಲಿಗೆ ಕಟ್ಟಿಟ್ಟ ಬುತ್ತಿʼ. ಬದುಕಿನಲ್ಲಿ ಬಹಳ ದೊಡ್ಡ ದೊಡ್ಡ ಕನಸು ಕಂಡವಳು ನಾನು. ಸಣ್ಣ ಕನಸೇ ಅಪರಾಧ ಎನ್ನುವ ಕಲಾಂ ಅವರ ಮಾತನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದವಳು. ಆದರೆ, ಈಗ ಈ ಮಾತು ಕೇಳಿ ಭೂಮಿ ಬಾಯಿ ತೆರೆಯಬಾರದಾ ಎನಿಸುತ್ತಿರುವುದು ಮಾತ್ರ ಸುಳ್ಳಲ್ಲ.

ಯಾರೂ ಜೊತೆಗಿರದಾಗ ಒಬ್ಬಳೇ ನಿಂತು ಹೋರಾಡಿ ಬದುಕು ಕಟ್ಟಿಕೊಂಡ ನಾನು, ಇಂದಿಗೂ ಯಾರ ಆಶ್ರಯವನ್ನೂ ಬಯಸುತ್ತಿಲ್ಲ. ಆದರೆ, ನಾನು ಮಾನಸಿಕವಾಗಿ ನಿನ್ನೊಂದಿಗಿದ್ದೇನೆ ಎಂಬ ಮಾತನ್ನು ಕೇಳಬೇಕು ಎಂದು ಹಂಬಲಿಸಿದ್ದು ಮಾತ್ರ ಸುಳ್ಳಲ್ಲ. ಜೀವವೊಂದು ಆಸರೆ ಬಯಸುವುದು ಸಹಜವೇ ತಾನೇ. ನಾನೂ ಹಾಗೆಯೇ ಹುಟ್ಟಿಸಿದ ಜೀವವೋ ಅಥವಾ ಜನ್ಮ ನೀಡಿದಾಕೆಯೋ ಜೊತೆಗೆ ನಿಲ್ಲುತ್ತಾಳೆ ಕೈ ಹಿಡಿದು ಮೇಲೆತ್ತುತ್ತಾರೆ ಎಂದು ಬಯಸಿದ್ದ ಭ್ರಮೆಯೇ ಈಗ ಕಳಚಿ ಬಿದ್ದಿದೆ. ಅಕ್ಷರಶಃ ನನ್ನವರು ಯಾರೂ ಇಲ್ಲ ಎಂಬುದು ಅರಿವಿಗೆ ಬಂದಿದೆ.



ಹೆಜ್ಜೆ ಮುಂದೆ ಸಾಗದೇ ನಿಂತಾಗ ಯಾರಾದರೂ ದಾರಿ ಹೋಕರು ದಾರಿ ತೋರಿಸಿಯಾರು ಎಂದು ಸಹಜವಾಗಿ ಬಯಸಿದಂತೆ ಬಯಸಿದವಳು ನಾನು. ಆದರೆ ನನ್ನ ಬದುಕಿನಲ್ಲಿ ದಾರಿ, ದಾರಿಹೋಕರು ಯಾವುದೂ ಇಲ್ಲವೆಂಬುದು ಅರಿವಾಗಿ ನಿಂತಲ್ಲೇ ನಿಂತು ಬಿಟ್ಟಿದ್ದೇನೆ. ಕಾಲು ಕೀಳಲೂ ಸಾಧ್ಯವಾಗದ ಸ್ಥಿತಿಯಲ್ಲಿ. ಕಣ್ಣು ಹಾಯಿಸಿದ ಕಡೆಯೆಲ್ಲಾ ಬರೀ ಕತ್ತಲೆಯೇ ರಾಚುತ್ತಿದೆ. ಬೆಳಕಿನ ಒಂದೇ ಒಂದು ಅಂಶವೂ ಕಾಣುತ್ತಲೇ ಇಲ್ಲ. ಕೂಗಲೂ ಸ್ವರವಿಲ್ಲದಂತಾಗಿ ಬಿದ್ದಿದ್ದೇನೆ. ಇದೇ ವೇಳೆ I cant be always be with you ಎಂಬ ಮಾತು ಕಿವಿಗೆ ಪದೆ ಪದೇ ಅಪ್ಪಳಿಸುತ್ತಿದೆ. ಹಾಗಾದರೆ, ಜೊತೆಗಿರುವುದು ಎಂದರೆ, ಅಷ್ಟೊಂದು ದುಬಾರಿಯೇ ತಿಳಿಯುತ್ತಿಲ್ಲ. ಮನಸ್ಸು ಪಾತಾಳಕ್ಕೆ ಬಿದ್ದು ಮೇಲೆ ಬರಲೇ ಆಗದ ಸ್ಥಿತಿಯಲ್ಲಿ ಒದ್ದಾಡುತ್ತಿದೆ. ಬದುಕಿನಲ್ಲಿ ಏನಾದರೂ ಪವಾಡವಾದೀತೇ ಎಂದು ಕಾಯುತ್ತಾ.

Monday, March 17, 2025

Happy Women’s day to strong women

 

ಮಾರ್ಚ್ ಬಂತೆಂದರೆ ಮಹಿಳೆಯರ ದಿನ, ನವೆಂಬರ್ ಕನ್ನಡ ತಿಂಗಳು ಹೀಗೆ ಒಂದೊಂದು ತಿಂಗಳನ್ನು ಒಂದೊಂದು ವಿಷಯಕ್ಕೆ ಬ್ರಾಂಡ್ ಮಾಡಿಬಿಡುತ್ತಾರೆ. ಮಹಿಳಾ ದಿನದಂದು ಮಹಿಳೆಯರ ದಿನದ ಶುಭಾಶಯ ಕೋರಿದರೆ, ನವೆಂಬರ್ ತಿಂಗಳಲ್ಲಿ ಕನ್ನಡದ ಬಗ್ಗೆ ಧ್ವನಿ ಎತ್ತಿದ ಮಾತ್ರಕ್ಕೆ ಅವುಗಳ ಉದ್ಧಾರವಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೂ ಅದರ ಗುಂಗಿನಿಂದ ಆಚೆ ಬಂದಿರುವುದಿಲ್ಲ.

ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ತುಸು ಸಂಭ್ರಮದಿಂದಲೇ ಆಚರಿಸಲಾಯಿತು. ಮಹಿಳಾ ಸಬಲೀಕರಣ, ಸ್ವಾತಂತ್ರ್ಯ, ಸಮಾನತೆ ಕುರಿತಾದ ಮಾತುಕತೆ ಜೋರಾಗಿಯೇ ಇತ್ತು. ಸಾಕಷ್ಟು ಮಂದಿ ವೈಯಕ್ತಿಕವಾಗಿ, ವಾಟ್ಸಾಪ್ ಗುಂಪಿನಲ್ಲಿ ಮಹಿಳಾ ದಿನದ ಕುರಿತಾಗಿ ನಾನು ಮಹಿಳೆ ಎಂಬ ಕಾರಣಕ್ಕೆ ಶುಭಾಶಯ ಕೋರಿದ್ದರು.

ಆದರೆ ಒಂದು ಸಂದೇಶ ತುಸು ತಡವಾಗಿ ಬಂದರೂ ಬಹಳ ಭಿನ್ನವಾಗಿತ್ತು. Happy Women’s Day to self motivated strong women ಅಂತ ಬರೆದು ಕಳಿಸಿದ್ದರು. ಇಷ್ಟು ವರ್ಷದಲ್ಲಿ ಮೊದಲ ಬಾರಿಗೆ ಹಾಗೆ ಗಟ್ಟಿಗಿತ್ತಿ ಅಂತ ಸಂಭೋದಿಸಿದ್ದು ನನಗೆ ಮುಜಗರದ ಜೊತೆಗೆ ಸ್ವಲ್ಪ ಯೋಚನೆಗೆ ದೂಡಿದ್ದು ಮಾತ್ರ ಸುಳ್ಳಲ್ಲ. ಇದಾದ ನಂತರ ಮತ್ತೊಬ್ಬರು ಕೂಡ ನೀನು ಬಹಳ Strong women ಎಂದು ಹೊಗಳಿದ್ದರು (ಹೊಗಳಿದ್ದು ಎಂದು ನಾನು ಭಾವಿಸಿಕೊಂಡದ್ದು).

ಆ ಕೂಡಲೇ, ತಮಾಷೆಗೆ ನಾನು ಮಹಿಳೆಯಾಗಿಲ್ಲ ಇನ್ನೂ ಹುಡುಗಿಯಷ್ಟೇ. ಹಾಗಾಗಿ ಮಹಿಳೆ ಎಂದು ಸಂಭೋದಿಸಿ ದೊಡ್ಡವಳನ್ನಾಗಿ ಮಾಡಬೇಡಿ ಎಂದು ಚಟಾಕಿ ಹಾರಿಸಿದ್ದೆ. ಆದರೆ ವಾಸ್ತವವಾಗಿ ನನ್ನ ಮನಸ್ಸಿನಲ್ಲಿ Strong women ಎಂಬ ವಿಚಾರದ ಬಗೆಗೇ ಆಲೋಚನೆ ಸುತ್ತುತ್ತಿತ್ತು.

Strong women ಎಂಬ ಪದ ಮನಸ್ಸಿನಲ್ಲಿ ಆಗಾಗ್ಗೆ ಸುಳಿಯುತ್ತಿತ್ತು. ಹಾಗಾಗಿ, ವಾಸ್ತವವಾಗಿ ನಾನು Strong women ಹೌದಾ? ಎಂಬ ಪ್ರಶ್ನೆ ಹಾಕಿಕೊಳ್ಳಲು ಮುಂದಾದೆ. ಏಕೆಂದರೆ ಹೊರಗಿನಿಂದ ನೋಡಲು ಬಹಳ ಖಡಕ್, ಗಟ್ಟಿ ಧ್ವನಿ, ಗಂಭೀರ ವದನೆ ಇವೆಲ್ಲವನ್ನೂ ನೋಡಿ ಸಮಾಜ ಹೀಗೆ ಗುರುತಿಸಿದ್ದು ಹೊಸದೇನೂ ಆಗಿರಲಿಲ್ಲ. ಆದರೆ, ನಿಜವಾಗಿಯೂ ಒಳಗೆ ಇಳಿದು ಅಂತರಂಗವನ್ನು ಒಮ್ಮೆ ನೋಡಿದರೆ ಅದರಲ್ಲಿ ಗಟ್ಟಿ ಅನ್ನೋ ಪದಕ್ಕೆ ಅರ್ಥವೇ ಇಲ್ಲ ಎಂಬುದು ನನಗಷ್ಟೇ ತಿಳಿದಿತ್ತು. ಅಲ್ಲದೇ, ಮುಖವಾಡದ ಹಿಂದಿನ ನನ್ನನ್ನು ಸಮಾಜಕ್ಕೆ ಪರಿಚಯಿಸುವ ಇರಾದೆಯೂ ನನಗೆ ಬೇಕಿರಲಿಲ್ಲ.  

ನನ್ನ ಬದುಕಿನಲ್ಲಿ ಪದೆ ಪದೇ ನಡೆದ ಅಹಿತಕರ ಘಟನೆಗಳು ನೀನು ಅದೆಷ್ಟು ಗಟ್ಟಿ? ಎಂದು ನನ್ನದೇ ಅಂತರಂಗ ಅಣಕವಾಡಿಸುತ್ತಲೇ ಇರುವ ಹೊತ್ತಿನಲ್ಲೇ ಗಟ್ಟಿಗಿತ್ತಿ ಎಂಬ ಸಂಭೋದನೆ ನನ್ನನ್ನು ಮತ್ತೊಮ್ಮೆ ಒಳಗೊಮ್ಮೆ ಇಣುಕಿ ನೋಡುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಈ ಹಿಂದೆಯೂ ಅದೆಷ್ಟೋ ಬಾರಿ ನನಗೆ ನಾನೇ ಹೇಳಿಕೊಂಡದ್ದೂ ಇದೆ. ಗಟ್ಟಿಗಿತ್ತಿ ಎಂಬ ಮುಖವಾಡ ಹಾಕಿಕೊಂಡು ಅಂತರಂಗದಲ್ಲಿ ಎಲ್ಲವನ್ನೂ ಮುಚ್ಚಿಟ್ಟುಕೊಂಡು ಅದೆಷ್ಟು ದಿನ ಈ ಸಮಾಜದಲ್ಲಿ ಬದುಕಲು ಸಾಧ್ಯ?, ಗಟ್ಟಿಗಿತ್ತಿ ಎಂಬ ಮುಖವಾಡ ಹಾಕಿಕೊಳ್ಳದೇ ಒಂಟಿ ಮಹಿಳೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲವೇ? ಹೀಗೆ ಪ್ರಶ್ನೆಗಳ ಸುರಿಮಳೆಯೇ ನನ್ನ ಮುಂದೆ ದುತ್ತೆಂದು ಕಾಡುತ್ತದೆ.

ಈಗಲೂ ಅದೇ ಪ್ರಶ್ನೆಗಳು ಕಾಡುತ್ತಲೇ ಇದೆ. ಏಕೆಂದರೆ, ಕಳೆದ ಐದು ತಿಂಗಳ ಹಿಂದೆ ಇದ್ದಕ್ಕಿದ್ದ ಹಾಗೆ ಅಮ್ಮ ಬಾರದ ಲೋಕಕ್ಕೆ ತೆರಳಿದ ಆ ಕ್ಷಣದಿಂದಲೂ ಆಗುತ್ತಿರುವ ಮಾನಸಿಕ ಯಮ ಯಾತನೆಯ ನಡುವೆಯೂ ಗಟ್ಟಿಗಿತ್ತಿ ಎಂಬ ಮುಖವಾಡ ಹಾಕಿಕೊಂಡು ತಿರುಗುತ್ತಿರುವ ನಾನು ಅದೆಷ್ಟರ ಮಟ್ಟಿಗೆ ಗಟ್ಟಿಗಿತ್ತಿ ಆಗಿರಲು ಸಾಧ್ಯ?

ಈ ಹಿಂದೆಯೂ ಸಾಕಷ್ಟು ನೋವು ಅನುಭವಿಸಿದ್ದರೂ ಅಮ್ಮನ ಸಾವು ನನ್ನ ಇಡೀ ಬದುಕಿನ ಬುಡವನ್ನೇ ಅಲ್ಲಾಡಿಸಿ ಬಿಡುತ್ತಿದೆ. ಸಾವು ಒಂದು ಸಹಜ ನೈಸರ್ಗಿಕ ಪ್ರಕ್ರಿಯೆ. ಹುಟ್ಟು ಅದೆಷ್ಟು ಸ್ವಾಭಾವಿಕವೋ, ಸಾವು ಕೂಡ ಅಷ್ಟೇ ಸ್ವಾಭಾವಿಕ ಎಂದೇ ಮನಸ್ಸಿಗೆ ತಂದುಕೊಂಡವಳು ನಾನು. ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರೂ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.



ಕಳೆದೊಂದು ತಿಂಗಳಿಂದ ಮನುಷ್ಯನ ಜೊತೆಗಿನ ಸಂಪರ್ಕವೇ ಬೇಡವೆನಿಸುವಷ್ಟು ಬೇಸರ ತರಿಸಿದೆ ಈ ಬದುಕು. ಕಾಲೇಜಿನ ಕೆಲಸ ಮುಗಿದ ಕೂಡಲೇ ಮನೆಗೆ ಹೋಗಿ ಬಾಗಿಲು ಮುಚ್ಚಿದರೆ ಮತ್ತೆ ಕಾಲೇಜಿಗೆ ಬರುವಾಗಲೇ ಬಾಗಿಲು ತೆರೆಯುವಷ್ಟರ ಮಟ್ಟಿಗೆ ನನ್ನನ್ನು ನಾನು ಸೀಮಿತಗೊಳಿಸಿಕೊಂಡು ಬಿಟ್ಟಿದ್ದೇನೆ. ಕೆಲಸದ ನಿಮಿತ್ತ ಅನಿವಾರ್ಯವಾಗಿ ಸಹೋದ್ಯೋಗಿಗಳ ಜೊತೆಗೆ ಕಾಟಾಚಾರದ ಮಾತುಗಳನ್ನಾಡುವುದು ಬಿಟ್ಟರೆ ಬೇರೆ ಯಾವ ಮಾತೂ ಬೇಡವೆನಿಸುತ್ತಿದೆ. ನನ್ನಿಷ್ಟದ ಕೆಲಸ ಬರವಣಿಗೆಯಲ್ಲೂ ತೊಡಗಿಸಿಕೊಳ್ಳಲು ಮನಸ್ಸು ಬರುತ್ತಿಲ್ಲ. ಒಂದು ರೀತಿ ಸತ್ತಂತೆ ಬಿದ್ದಿರುತ್ತೇನೆ.

ಸುತ್ತಲಿನ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದರ ಅರಿವೂ ಇಲ್ಲದಂತೆ ಯಂತ್ರದ ಹಾಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕರ್ತವ್ಯವೇ ದೇವರು ಎಂಬಂತೆ ಅದರಲ್ಲೇ ಮುಳುಗಿರುವುದು ಬಿಟ್ಟರೆ ಬೇರೆ ಯಾವುದರ ಅರಿವೂ ಇಲ್ಲದಷ್ಟು ಅನ್ಯಮನಸ್ಕಳಾಗಿದ್ದೇನೆ. ಹಾಗಿದ್ದೂ ಗಟ್ಟಿಗಿತ್ತಿ ಆಗಲು ಹೇಗೆ ಸಾಧ್ಯ? ಎಂಬುದೇ ಸೋಜಿಗ. ನನಗೆ ನನ್ನದೇ ಸ್ಥಿತಿಯನ್ನು ನೋಡಿಕೊಂಡು ಏನೆಂದು ಹೇಳಬೇಕು? ಎಂಬುದೇ ತಿಳಿಯುತ್ತಿಲ್ಲ.