ಮಾರ್ಚ್ ಬಂತೆಂದರೆ
ಮಹಿಳೆಯರ ದಿನ, ನವೆಂಬರ್ ಕನ್ನಡ ತಿಂಗಳು ಹೀಗೆ ಒಂದೊಂದು ತಿಂಗಳನ್ನು ಒಂದೊಂದು ವಿಷಯಕ್ಕೆ ಬ್ರಾಂಡ್
ಮಾಡಿಬಿಡುತ್ತಾರೆ. ಮಹಿಳಾ ದಿನದಂದು ಮಹಿಳೆಯರ ದಿನದ ಶುಭಾಶಯ ಕೋರಿದರೆ, ನವೆಂಬರ್ ತಿಂಗಳಲ್ಲಿ ಕನ್ನಡದ
ಬಗ್ಗೆ ಧ್ವನಿ ಎತ್ತಿದ ಮಾತ್ರಕ್ಕೆ ಅವುಗಳ ಉದ್ಧಾರವಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ.
ಆದರೂ ಅದರ ಗುಂಗಿನಿಂದ ಆಚೆ ಬಂದಿರುವುದಿಲ್ಲ.
ಪ್ರತಿ ವರ್ಷದಂತೆ
ಈ ವರ್ಷವೂ ನಮ್ಮ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ತುಸು ಸಂಭ್ರಮದಿಂದಲೇ ಆಚರಿಸಲಾಯಿತು.
ಮಹಿಳಾ ಸಬಲೀಕರಣ, ಸ್ವಾತಂತ್ರ್ಯ, ಸಮಾನತೆ ಕುರಿತಾದ ಮಾತುಕತೆ ಜೋರಾಗಿಯೇ ಇತ್ತು. ಸಾಕಷ್ಟು ಮಂದಿ
ವೈಯಕ್ತಿಕವಾಗಿ, ವಾಟ್ಸಾಪ್ ಗುಂಪಿನಲ್ಲಿ ಮಹಿಳಾ ದಿನದ ಕುರಿತಾಗಿ ನಾನು ಮಹಿಳೆ ಎಂಬ ಕಾರಣಕ್ಕೆ ಶುಭಾಶಯ
ಕೋರಿದ್ದರು.
ಆದರೆ ಒಂದು ಸಂದೇಶ
ತುಸು ತಡವಾಗಿ ಬಂದರೂ ಬಹಳ ಭಿನ್ನವಾಗಿತ್ತು. Happy Women’s Day to self
motivated strong women ಅಂತ ಬರೆದು ಕಳಿಸಿದ್ದರು.
ಇಷ್ಟು ವರ್ಷದಲ್ಲಿ ಮೊದಲ ಬಾರಿಗೆ ಹಾಗೆ ಗಟ್ಟಿಗಿತ್ತಿ ಅಂತ ಸಂಭೋದಿಸಿದ್ದು ನನಗೆ ಮುಜಗರದ ಜೊತೆಗೆ
ಸ್ವಲ್ಪ ಯೋಚನೆಗೆ ದೂಡಿದ್ದು ಮಾತ್ರ ಸುಳ್ಳಲ್ಲ. ಇದಾದ ನಂತರ ಮತ್ತೊಬ್ಬರು ಕೂಡ ನೀನು ಬಹಳ Strong
women
ಎಂದು ಹೊಗಳಿದ್ದರು (ಹೊಗಳಿದ್ದು ಎಂದು ನಾನು ಭಾವಿಸಿಕೊಂಡದ್ದು).
ಆ ಕೂಡಲೇ, ತಮಾಷೆಗೆ
ನಾನು ಮಹಿಳೆಯಾಗಿಲ್ಲ ಇನ್ನೂ ಹುಡುಗಿಯಷ್ಟೇ. ಹಾಗಾಗಿ ಮಹಿಳೆ ಎಂದು ಸಂಭೋದಿಸಿ ದೊಡ್ಡವಳನ್ನಾಗಿ ಮಾಡಬೇಡಿ
ಎಂದು ಚಟಾಕಿ ಹಾರಿಸಿದ್ದೆ. ಆದರೆ ವಾಸ್ತವವಾಗಿ ನನ್ನ ಮನಸ್ಸಿನಲ್ಲಿ Strong
women
ಎಂಬ ವಿಚಾರದ ಬಗೆಗೇ ಆಲೋಚನೆ ಸುತ್ತುತ್ತಿತ್ತು.
Strong women ಎಂಬ ಪದ ಮನಸ್ಸಿನಲ್ಲಿ ಆಗಾಗ್ಗೆ ಸುಳಿಯುತ್ತಿತ್ತು. ಹಾಗಾಗಿ, ವಾಸ್ತವವಾಗಿ ನಾನು Strong women ಹೌದಾ? ಎಂಬ ಪ್ರಶ್ನೆ ಹಾಕಿಕೊಳ್ಳಲು ಮುಂದಾದೆ. ಏಕೆಂದರೆ ಹೊರಗಿನಿಂದ ನೋಡಲು ಬಹಳ ಖಡಕ್, ಗಟ್ಟಿ ಧ್ವನಿ, ಗಂಭೀರ ವದನೆ ಇವೆಲ್ಲವನ್ನೂ ನೋಡಿ ಸಮಾಜ ಹೀಗೆ ಗುರುತಿಸಿದ್ದು ಹೊಸದೇನೂ ಆಗಿರಲಿಲ್ಲ. ಆದರೆ, ನಿಜವಾಗಿಯೂ ಒಳಗೆ ಇಳಿದು ಅಂತರಂಗವನ್ನು ಒಮ್ಮೆ ನೋಡಿದರೆ ಅದರಲ್ಲಿ ಗಟ್ಟಿ ಅನ್ನೋ ಪದಕ್ಕೆ ಅರ್ಥವೇ ಇಲ್ಲ ಎಂಬುದು ನನಗಷ್ಟೇ ತಿಳಿದಿತ್ತು. ಅಲ್ಲದೇ, ಮುಖವಾಡದ ಹಿಂದಿನ ನನ್ನನ್ನು ಸಮಾಜಕ್ಕೆ ಪರಿಚಯಿಸುವ ಇರಾದೆಯೂ ನನಗೆ ಬೇಕಿರಲಿಲ್ಲ.
ನನ್ನ ಬದುಕಿನಲ್ಲಿ
ಪದೆ ಪದೇ ನಡೆದ ಅಹಿತಕರ ಘಟನೆಗಳು ನೀನು ಅದೆಷ್ಟು ಗಟ್ಟಿ? ಎಂದು ನನ್ನದೇ ಅಂತರಂಗ ಅಣಕವಾಡಿಸುತ್ತಲೇ
ಇರುವ ಹೊತ್ತಿನಲ್ಲೇ ಗಟ್ಟಿಗಿತ್ತಿ ಎಂಬ ಸಂಭೋದನೆ ನನ್ನನ್ನು ಮತ್ತೊಮ್ಮೆ ಒಳಗೊಮ್ಮೆ ಇಣುಕಿ ನೋಡುವಂತೆ
ಮಾಡಿದ್ದು ಮಾತ್ರ ಸುಳ್ಳಲ್ಲ. ಈ ಹಿಂದೆಯೂ ಅದೆಷ್ಟೋ ಬಾರಿ ನನಗೆ ನಾನೇ ಹೇಳಿಕೊಂಡದ್ದೂ ಇದೆ. ಗಟ್ಟಿಗಿತ್ತಿ
ಎಂಬ ಮುಖವಾಡ ಹಾಕಿಕೊಂಡು ಅಂತರಂಗದಲ್ಲಿ ಎಲ್ಲವನ್ನೂ ಮುಚ್ಚಿಟ್ಟುಕೊಂಡು ಅದೆಷ್ಟು ದಿನ ಈ ಸಮಾಜದಲ್ಲಿ
ಬದುಕಲು ಸಾಧ್ಯ?, ಗಟ್ಟಿಗಿತ್ತಿ ಎಂಬ ಮುಖವಾಡ ಹಾಕಿಕೊಳ್ಳದೇ ಒಂಟಿ ಮಹಿಳೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲವೇ?
ಹೀಗೆ ಪ್ರಶ್ನೆಗಳ ಸುರಿಮಳೆಯೇ ನನ್ನ ಮುಂದೆ ದುತ್ತೆಂದು ಕಾಡುತ್ತದೆ.
ಈಗಲೂ ಅದೇ ಪ್ರಶ್ನೆಗಳು
ಕಾಡುತ್ತಲೇ ಇದೆ. ಏಕೆಂದರೆ, ಕಳೆದ ಐದು ತಿಂಗಳ ಹಿಂದೆ ಇದ್ದಕ್ಕಿದ್ದ ಹಾಗೆ ಅಮ್ಮ ಬಾರದ ಲೋಕಕ್ಕೆ
ತೆರಳಿದ ಆ ಕ್ಷಣದಿಂದಲೂ ಆಗುತ್ತಿರುವ ಮಾನಸಿಕ ಯಮ ಯಾತನೆಯ ನಡುವೆಯೂ ಗಟ್ಟಿಗಿತ್ತಿ ಎಂಬ ಮುಖವಾಡ ಹಾಕಿಕೊಂಡು
ತಿರುಗುತ್ತಿರುವ ನಾನು ಅದೆಷ್ಟರ ಮಟ್ಟಿಗೆ ಗಟ್ಟಿಗಿತ್ತಿ ಆಗಿರಲು ಸಾಧ್ಯ?
ಈ ಹಿಂದೆಯೂ ಸಾಕಷ್ಟು ನೋವು ಅನುಭವಿಸಿದ್ದರೂ ಅಮ್ಮನ ಸಾವು ನನ್ನ ಇಡೀ ಬದುಕಿನ ಬುಡವನ್ನೇ ಅಲ್ಲಾಡಿಸಿ ಬಿಡುತ್ತಿದೆ. ಸಾವು ಒಂದು ಸಹಜ ನೈಸರ್ಗಿಕ ಪ್ರಕ್ರಿಯೆ. ಹುಟ್ಟು ಅದೆಷ್ಟು ಸ್ವಾಭಾವಿಕವೋ, ಸಾವು ಕೂಡ ಅಷ್ಟೇ ಸ್ವಾಭಾವಿಕ ಎಂದೇ ಮನಸ್ಸಿಗೆ ತಂದುಕೊಂಡವಳು ನಾನು. ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರೂ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.
ಕಳೆದೊಂದು ತಿಂಗಳಿಂದ ಮನುಷ್ಯನ ಜೊತೆಗಿನ ಸಂಪರ್ಕವೇ ಬೇಡವೆನಿಸುವಷ್ಟು ಬೇಸರ ತರಿಸಿದೆ ಈ ಬದುಕು. ಕಾಲೇಜಿನ ಕೆಲಸ ಮುಗಿದ ಕೂಡಲೇ ಮನೆಗೆ ಹೋಗಿ ಬಾಗಿಲು ಮುಚ್ಚಿದರೆ ಮತ್ತೆ ಕಾಲೇಜಿಗೆ ಬರುವಾಗಲೇ ಬಾಗಿಲು ತೆರೆಯುವಷ್ಟರ ಮಟ್ಟಿಗೆ ನನ್ನನ್ನು ನಾನು ಸೀಮಿತಗೊಳಿಸಿಕೊಂಡು ಬಿಟ್ಟಿದ್ದೇನೆ. ಕೆಲಸದ ನಿಮಿತ್ತ ಅನಿವಾರ್ಯವಾಗಿ ಸಹೋದ್ಯೋಗಿಗಳ ಜೊತೆಗೆ ಕಾಟಾಚಾರದ ಮಾತುಗಳನ್ನಾಡುವುದು ಬಿಟ್ಟರೆ ಬೇರೆ ಯಾವ ಮಾತೂ ಬೇಡವೆನಿಸುತ್ತಿದೆ. ನನ್ನಿಷ್ಟದ ಕೆಲಸ ಬರವಣಿಗೆಯಲ್ಲೂ ತೊಡಗಿಸಿಕೊಳ್ಳಲು ಮನಸ್ಸು ಬರುತ್ತಿಲ್ಲ. ಒಂದು ರೀತಿ ಸತ್ತಂತೆ ಬಿದ್ದಿರುತ್ತೇನೆ.
ಸುತ್ತಲಿನ ಜಗತ್ತಿನಲ್ಲಿ
ಏನಾಗುತ್ತಿದೆ ಎಂಬುದರ ಅರಿವೂ ಇಲ್ಲದಂತೆ ಯಂತ್ರದ ಹಾಗೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕರ್ತವ್ಯವೇ
ದೇವರು ಎಂಬಂತೆ ಅದರಲ್ಲೇ ಮುಳುಗಿರುವುದು ಬಿಟ್ಟರೆ ಬೇರೆ ಯಾವುದರ ಅರಿವೂ ಇಲ್ಲದಷ್ಟು ಅನ್ಯಮನಸ್ಕಳಾಗಿದ್ದೇನೆ.
ಹಾಗಿದ್ದೂ ಗಟ್ಟಿಗಿತ್ತಿ ಆಗಲು ಹೇಗೆ ಸಾಧ್ಯ? ಎಂಬುದೇ ಸೋಜಿಗ. ನನಗೆ ನನ್ನದೇ ಸ್ಥಿತಿಯನ್ನು ನೋಡಿಕೊಂಡು
ಏನೆಂದು ಹೇಳಬೇಕು? ಎಂಬುದೇ ತಿಳಿಯುತ್ತಿಲ್ಲ.
No comments:
Post a Comment