ಅದೊಂದು ದಿನ ವಾಟ್ಸಾಪ್‌ನಲ್ಲಿ ಕಸಿನ್ಸ್ ಗ್ರೂಪ್ ಎಂದು ಕ್ರಿಯೇಟ್ ಆಗಿತ್ತು. ಆ ಹೊತ್ತಿಗೆ ನಾನು ಬಹಳ ಅನ್ಯ ಮನಸ್ಕಳಾಗಿದ್ದೆ. ಕೆಲಸದ ಒತ್ತಡ, ಬದುಕಿನ ಜಂಜಾಟ, ಬೇಡದ ಆಲೋಚನೆಗಳು ಮನಸ್ಸಿನ ತುಂಬಾ ಹುಚ್ಚೆದ್ದು ಕುಣಿಯುತ್ತಿದ್ದವು. ಹಾಗಾಗಿ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ದಿನ ಕಳೆದಂತೆ ವಾಟ್ಸಾಪ್ ಬಹಳ ಆಕ್ವೀವ್ ಆಗಲು ಪ್ರಾರಂಭಿಸಿತು. ನಾವು ೧೦ ಜನ ಕಸಿನ್ಸ್ ಇದ್ದೀವಿ. ಒಂದಷ್ಟು ಜನ ಅಲ್ಲಿ, ಇಲ್ಲಿ ಎಂದು ಬಹಳ ಜೋರಾಟ ಉಸುರುತ್ತಿದ್ದರು. ಆದರೆ ನಾನು ನನ್ನದೇ ಜಗತ್ತಿನಲ್ಲಿ ಮುಳುಗಿದ್ದರಿಂದ ಅದಾವುದರ ಕಡೆಗೂ ಹೆಚ್ಚು ಗಮನ ಕೊಡಲಿಲ್ಲ.
ಆರಂಭ ಶೂರತ್ವ ಎಂಬಂತೆ ಎಲ್ಲರೂ ಅವರಿಗೆ ತೋಚಿದ ಸ್ಥಳಗಳನ್ನು ಪಟ್ಟಿ ಮಾಡುತ್ತಾ ಹೋದರು. ಮಂಗಳೂರಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದರಿಂದ ಪ್ರವಾಸದ ಚಿಂತನೆಯೇ ಮನಸ್ಸಿನಲ್ಲಿ ಸುಳಿಯಲಿಲ್ಲ. ಕೆಲವರು ಬೀಚ್, ಟ್ರಕ್ಕಿಂಗ್ ಎಂದೆಲ್ಲಾ ಸಲಹೆ ನೀಡುತ್ತಿದ್ದರು. ಮಳೆ ಕಾರಣಕ್ಕಾಗಿ ಈ ಯಾವ ಸ್ಥಳಕ್ಕೂ ಭೇಟಿ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿಬಿಟ್ಟೆ. ಹಾಗಾಗಿ ಕೆಲವರಿಗೆ ನನ್ನ ಬಗ್ಗೆ ಸ್ವಲ್ಪ ಅಸಹನೆಯೂ ಮೂಡದೇ ಇಲ್ಲ. ಅಷ್ಟರಲ್ಲಾಗಲೇ ವರುಣ ರುದ್ರ ರೂಪ ತೋರಲು ಮುಂದಾಗಿದ್ದರಿಂದ ಹೀಗೆ ಮಾತಾಡುವುದು ಅನಿವಾರ್ಯವಾಗಿತ್ತು.
ಕೊನೆಗೆ ಒಂದೆರಡು ಸ್ಥಳಗಳನ್ನು ಅಂತಿಮ ಸುತ್ತಿಗೆ ತಂದು ವಾಟ್ಸಾಪ್
ಪೋಲಿಂಗ್ ಶುರು ಮಾಡಿದರು. ಹೆಚ್ಚು ಮತ ಗಳಿಸಿದ ಮಡಿಕೇರಿ ವಿಜಯಶಾಲಿಯಾಯಿತು. ಅದಕ್ಕಾಗಿ ಸಾಕಷ್ಟು
ಸುತ್ತಿನ ವಾಟ್ಸಾಪ್ ವಿಡಿಯೋ ಮಾತುಕತೆ ಎಲ್ಲವೂ ನಡೆಯಿತು. ಆರಂಭದ ಒಂದೆರಡು ಕರೆಗಳಲ್ಲಿ ನಾನು ಭಾಗಿಯಾಗಲು
ಸಾಧ್ಯವಾಗಲಿಲ್ಲ. ಆದರೆ ಅಂತಿಮ ಹಂತದ ಕರೆಗೆ ಭಾಗವಹಿಸಿದೆ. ಎಲ್ಲವೂ ಸುಸೂತ್ರವಾಯಿತು ಎನ್ನುವಷ್ಟರಲ್ಲಿ
ಒಂದೆರಡು ವಿಕೆಟ್ ಪತನ ಆರಂಭವಾಯಿತು.
ಪತನವಾದ ವಿಕೆಟ್‌ಗಳನ್ನು ಮತ್ತೆ ಕ್ರೀಸ್‌ಗೆ ತರಲು ಸಾಕಷ್ಟು ಮನವೊಲಿಕೆ ಮಾಡಿದರೂ ಪ್ರಯೋಜನಕ್ಕೆ ಬರಲಿಲ್ಲ. ಹಾಗಾಗಿ ಕೊನೆಗೆ ಮತ್ತೊಂದು ಗ್ರೂಪ್ ಹುಟ್ಟಿಕೊಂಡಿತು. ಅಲ್ಲಿಗೆ ಉಳಿದದ್ದು ೫ ಮಂದಿ ಮಾತ್ರ. ಮಡಿಕೇರಿ ಸುತ್ತಮುತ್ತಲಿನ ಸ್ಥಳ ವೀಕ್ಷಣೆ ಮತ್ತು ಮೋಜು ಮಸ್ತಿ ಎಂದು ಎರಡು ದಿನದ ಪ್ರವಾಸ ಎಂದು ಅಂತಿಮವಾಗಿ ತೀರ್ಮಾನವಾದ ನಂತರವೂ ಅಸ್ಥಿರತೆಯ ನಡುವೆಯೂ ಎಲ್ಲವೂ ಫಿಕ್ಸ್ ಆಗಿತ್ತು. ಇನ್ನೇನು ಹೊರಟುವ ಮುನ್ನಾ ದಿನ ವರುಣನಿಗೆ ಅದಕೋ ಮುನಿಸು ತುಸು ಹೆಚ್ಚೇ ಆಯಿತು. ವರುಣನಿಗೆ ಸಾಥ್ ಕೊಟ್ಟ ಮೋಡಗಳು ಮರೆಯಾಗಲೇ ಇಲ್ಲ. ನಿರಂತರ ಜಡಿ ಮಳೆ ಬಿಟ್ಟೂ ಬಿಡದೇ ಸುರಿಯಲು ಆರಂಭಿಸಿತು.
ಕರಾವಳಿ ಭಾಗದ ಜನತೆಗೆ ಮಳೆ ಹೊಸದೇನೂ ಅಲ್ಲ. ಅದೊಂದು ಉಪ್ಪಿನಕಾಯಿ
ಇದ್ದ ಹಾಗೆ, ರುಚಿಗೆ ಇದ್ದರೇನೇ ಊಟಕ್ಕೆ ಮೆರಗು. ಒಲ್ಲದ ಮನಸ್ಸಿನಿಂದಲೇ ನಾನು ಕೂಡ ತುಸು ಚುರುಕಾಗಿ
ಹೊರಟು ನಿಂತೆ. ಹಿಂದಿನ ದಿನ ಬೆಳಗ್ಗೆ ಬಿಡುವಿದ್ದ ಕಾರಣ ಬಹಳ ಅಳೆದುತೂಗಿ ಬಟ್ಟೆಬರೆ ಎಲ್ಲವನ್ನೂ
ಪ್ಯಾಕ್ ಮಾಡಿದೆ. ಬಿರುಸು ಮಳೆ ಜೊತೆಗೇ ಕಾಲೇಜಿಗೆ ಹೋಗಿ ಪರೀಕ್ಷಾ ಕೆಲಸವನ್ನು ಮುಗಿಸಿ ಬಂದೆ. ನಾಳೆ
ಹೊರಡುವ ಸಂಭ್ರಮಕ್ಕೋ ಅಥವಾ ಕಾಲೇಜಿನಲ್ಲಿ ಕೇಳಿದ ಆ ಒಂದು ಮಾತಿಗೋ ಮನಸ್ಸು ತುಸು ಹೆಚ್ಚೇ ಬಾಡಿತ್ತು.
ಬಹಳ ಭಾರವಾಗಿ ಮನೆಗೆ ಬಂದೆ.
ಆದರೂ ಬೆಳಗ್ಗೆ ೩ ಗಂಟೆಗೆ ಅಲಾರಂ ಫಿಕ್ಸ್ ಮಾಡಿ ಮಲಗಿದೆ. ಹೊರಗೆ
ಮಳೆ ಜಿಟಿ ಜಿಟಿ ಎಂದು ಸುರಿಯುತ್ತಲೇ ಇತ್ತು. ರಾತ್ರಿಯಿಡೀ ಮಳೆ ಹಿಡಿದಿದ್ದರಿಂದ ಕರೆಂಟ್ ಕೈ ಕೊಟ್ಟಿತ್ತು.
ಅಯ್ಯೋ ಎಂದು ಗ್ಯಾಸ್‌ನಲ್ಲೇ ಬಿಸಿ ನೀರು ಕಾಯಿಸಿ ಸ್ನಾನ ಮಾಡಿ ರೆಡಿಯಾಗುತ್ತಿದ್ದೆ. ಮತ್ತೆ ವರುಣ
ರುದ್ರ ರೂಪಕ್ಕೆ ಇಳಿದೇ ಬಿಟ್ಟ. ಅದೇನೇ ಆಗಲೀ ಹೊರಡುವುದೇ ಎಂದು ಗಟ್ಟಿ ಮನಸ್ಸು ಮಾಡಿ ಕೆಳಗೆ ಪಾರ್ಕಿಂಗ್
ಲಾಟ್ ಬಳಿ ನಿಂತರೆ ಗೇಟ್ ತೆರೆಯಲೂ ಹೆಜ್ಜೆ ಮುಂದೆ ಹೋಗದೇ ಮನಸ್ಸು ಹಿಂದೇಟು ಹಾಕಲು ಪ್ರಾರಂಭಿಸಿತು.
ಅದೇಕೋ ಗೊತ್ತಿಲ್ಲ ಮನಸ್ಸು ಕಾಲೇಜಿನಲ್ಲಿ ಕೇಳಿದ ಆ ಮಾತನ್ನು ಮತ್ತೆ ಮತ್ತೆ ನೆನಪು ಮಾಡುತ್ತಲೇ ಇತ್ತು.
ಆ ವೇಳೆಗಾಗಲೇ ಬೆಳಗ್ಗೆ ೪.೩೦ ದಾಟಿತ್ತು.
ನಿಲ್ಲದ ವರುಣನ ಆರ್ಭಟ, ಮನಸ್ಸಿನಲ್ಲಿ ಕೊರೆಯುತ್ತಿದ್ದ ಆ ಮಾತು ಎಲ್ಲದರಿಂದಾಗಿ
ಸುಮ್ಮನೆ ಮತ್ತೆ ಮೇಲೆ ಬಂದು ವಾಟ್ಸಾಪ್‌ನಲ್ಲಿ ಮಳೆ ಕಾರಣದಿಂದಾಗಿ ಮಡಿಕೇರಿ ಪ್ರವಾಸಕ್ಕೆ ಬರುತ್ತಿಲ್ಲ
ಎಂದು ತಿಳಿಸಿ ಮತ್ತೆ ಹಾಸಿಗೆ ಮೇಲೆ ಎರಗಿದೆ. ಕನಸಿನಲ್ಲಿ ಮಡಕೇರಿಯ ದರ್ಶನವಾಯಿತಾದರೂ, ಮಳೆ ಮಾತ್ರ
ಸುರಿಯುತ್ತಲೇ ಇತ್ತು. ಪ್ಯಾಕ್ ಮಾಡಿಟ್ಟ ಬ್ಯಾಗ್ ಮೂಲೆ ಸೇರಿಕೊಂಡು ನಿನ್ನ ಯೋಗ್ಯತೆ ಇಷ್ಟೇ ಎಂದು
ಅಣಕಿಸಿದ್ದು ಮಾತ್ರ ಸುಳ್ಳಲ್ಲ.



No comments:
Post a Comment