ಆ ದಿನ ನಾಳೆ ಊಟ ತರಬೇಡ ಅಂತಾ ಹೇಳಿ ಊಟದ ಮೆನುವನ್ನು ವಿವರಿಸಿದ್ದೆ. ಹಾಗಾಗಿ ಮರುದಿನ ಕಾಲೇಜಿಗೆ ಬರುವಾಗ ಊಟದ ಡಬ್ಬಿಯ ಜೊತೆಗೆ ಬರಲಿಲ್ಲ. ಕಾರ್ಯಕ್ರಮಕ್ಕಂತೂ ಆಹ್ವಾನ ನೀಡಲಿಲ್ಲ. ಹಿಂದಿನ ದಿನ ಹೇಳಿದ ಹಾಗೆ ಊಟಕ್ಕಾದರೂ ಕರೆಯುವೆ ಎಂದು ಮಧ್ಯಾಹ್ನವಿಡೀ ಕಾದು ಕೊನೆಗೆ ಖಾಲಿ ಹೊಟ್ಟೆಯಲ್ಲೇ ಸಂಜೆ ಮನೆಗೆ ತೆರಳಿ ಬಿಟ್ಟೆ.
ವಾಸ್ತವವಾಗಿ, ಊಟ
ನನಗೆ ಮುಖ್ಯ ವಿಷಯವಲ್ಲ; ನಿನ್ನ ಮಾತಿಗೆ ಗೌರವ ಕೊಡಬೇಕೆಂಬ ಹಂಬಲವಷ್ಟೇ. ಮನಸ್ಸು ರಚ್ಚೆ ಹಿಡಿಯದಿರಲಿ
ಎಂಬ ಕಾರಣಕ್ಕೆ, ಬಹುಶಃ ನೀನು ಕಾರ್ಯಕ್ರಮದ ಗಡಿಬಿಡಿಯಲ್ಲಿ ಮರೆತು ಹೋಗಿರಬಹುದು ಎಂದು ಸಮಾಧಾನ ಮಾಡಿಕೊಂಡೆ.
ಆದರೆ ಹಸಿವು ಸುಮ್ಮನೆ ಕೂರಲು ಬಿಡಲಿಲ್ಲ. ಹಾಗಾಗಿ ಹೀಗೆ ಬರೆದು ಭಾರ ಇಳಿಸಿಕೊಳ್ಳುತ್ತಿದ್ದೇನೆ.
ತಪ್ಪು ತಿಳಿಯಬೇಡ.
ನೀನು ನನಗಿಂತಲೂ ವಯಸ್ಸಿನಲ್ಲಿ,
ಅನುಭವದಲ್ಲಿ ಹಿರಿಯವನಾಗಿದ್ದರೂ, ನಾವಿಬ್ಬರೂ ಅದೆಷ್ಟೋ ದಿನಗಳನ್ನು, ಸಂಜೆಗಳನ್ನು ಜೊತೆಗೆ ಕಳೆದಿದ್ದೇವೆ.
ಆಗೆಲ್ಲಾ ನಮ್ಮಿಬ್ಬರ ಮಧ್ಯೆ ಸಾಕಷ್ಟು ಚರ್ಚೆ, ವಾಗ್ವಾದ, ಸಣ್ಣ ಜಗಳ ಎಲ್ಲವೂ ಆಗಿದೆ. ಅದಾವುದಕ್ಕೂ
ಅಷ್ಟೊಂದು ಮಹತ್ವ ಕೊಡಲಿಲ್ಲ. ಸಾಕಷ್ಟು ಸಂದರ್ಭಗಳಲ್ಲಿ ಮನಸ್ಸು ಬೇಸರಕ್ಕೆ ತಿರುಗಿದ್ದೂ ಇದೆ. ಅದೆಲ್ಲವನ್ನೂ
ಪಕ್ಕಕ್ಕಿರಿಸಿ ಮುಂದೆ ಸಾಗಿದ್ದೇವೆ. ಅದೆಷ್ಟೋ ಬಾರಿ ನೀನು ಕೇಳಿದ ಸಹಾಯಕ್ಕೋ ಅಥವಾ ಮತ್ತಾವುದೋ ಕೆಲಸಕ್ಕೋ
ಇಲ್ಲ ಎಂದು ಹೇಳಬೇಕೆಂದು ಗಟ್ಟಿ ಮನಸ್ಸು ಮಾಡಿದರೂ, ನಿನ್ನ ಧ್ವನಿ ಕೇಳಿದ ಕೂಡಲೇ ಎಲ್ಲವನ್ನು ಕ್ಷಣ
ಮಾತ್ರದಲ್ಲಿ ಮರೆತು ಬಿಡುತ್ತಿದ್ದೆ. ಅದೇನು ಮೋಡಿ ಮಾಡಿದ್ದೀಯೋ ತಿಳಿದಿಲ್ಲ. ಮನಸ್ಸಿನ ಆಳಕ್ಕೆ ಇಳಿದುಬಿಟ್ಟಿರುವೆ.
ನಾನು ಸ್ವಲ್ಪ ಅಂತರ್ಮುಖಿ.
ಯಾರ ಜೊತೆಗೂ ಇರದ ಸಲುಗೆ ನಿನ್ನೊಂದಿಗೆ ಬೆಳೆದಿದೆ. ಹಾಗಾಗಿ ನನ್ನ ಪರಿಸ್ಥಿತಿ ಏನೇ ಇದ್ದರೂ ನಿನ್ನ
ಮಾತಿಗೆ ಕಟ್ಟುಬಿದ್ದು ಕೆಲಸಕ್ಕೆ ಮುಂದಾಗುತ್ತೇನೆ. ಆದರೆ ಇತ್ತೀಚೆಗೆ ನನ್ನನ್ನು ಬಳಸಿಕೊಂಡ ರೀತಿ
ಮಾತ್ರ ಬಹಳ ಬೇಸರ ತರಿಸುತ್ತಿದೆ. ಹಾಗೆಂದು ನನಗೆ ವಿಶೇಷ ಸ್ಥಾನಮಾನ ಬೇಕೆಂದು ಅಥವಾ ಬೇರೆ ಯಾವುದೇ
ರೀತಿಯ ಪ್ರಾಶಸ್ತ್ಯ ಬೇಕೆಂದೂ ಬಯಸುವುದಿಲ್ಲ. ಆದರೆ ನಿನ್ನ ಅಗತ್ಯ ಪೂರೈಸಿದ ನಂತರ ನನ್ನ ಪರಿಚಯವೇ
ಇಲ್ಲದಂತೆ ನಡೆದುಕೊಳ್ಳುವ ನಿನ್ನ ವರ್ತನೆ ಮನಸ್ಸಿಗೆ ಘಾಸಿ ಮಾಡುತ್ತಿದೆ.
ಎಲ್ಲರ ಹಾಗೆ ನೀನಲ್ಲಾ.
ಒಬ್ಬ ಸೂಕ್ಷ್ಮ, ಸಂವೇದನಾಶೀಲ, ಪ್ರೌಢ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿ ಎಂಬ ಕಾರಣಕ್ಕಾಗಿಯೇ ಮನಸ್ಸಿನ
ಒಳಗೆ ಬಿಟ್ಟುಕೊಂಡೆ. ನನ್ನ ಪರಿಸ್ಥಿತಿ ಎಂಥಹದ್ದೇ ಇದ್ದರೂ ಅದನ್ನು ಲೆಕ್ಕಿಸದೇ ನನ್ನ ಜೊತೆಗೆ ನೀನು
ಆತ್ಮೀಯ ಸಂಬಂಧ ಬೆಳೆಸಿದೆ. ಎಲ್ಲರ ಹಾಗೆ ನೀನಲ್ಲ ಎಂಬುದು ಆ ಕ್ಷಣಕ್ಕೆ ನನಗೆ ಮನವರಿಕೆಯಾಗಿತ್ತು.
ಹೌದು! ನಿನಗೆ ನಿನ್ನದೇ
ಆದ ಸಾಕಷ್ಟು ಒತ್ತಡಗಳು, ಕೆಲಸಗಳು ಎಲ್ಲವೂ ಇದ್ದಾವೆ ಎಂಬುದು ನನಗೆ ಸ್ಪಷ್ಟವಾಗಿ ಅರಿವಿದೆ ಗೆಳೆಯ.
ಆದರೆ ಇತ್ತೀಚೆಗೆ ನೀನು ನಡೆದುಕೊಳ್ಳುವ ರೀತಿಗೆ ಮನದಲ್ಲಿ ಒಂದು ಸಣ್ಣ ಆತಂಕ ಮೂಡುತ್ತಿದೆ. ಅಂದು
ಸಂಜೆಗೆ ಮನೆಗೆ ಬಂದ ಮೇಲೂ ಮನಸ್ಸು ತಹಬದಿಗೆ ಬರಲಿಲ್ಲ. ಹಾಗಾಗಿ ಇಷ್ಟದ ಸಂಗೀತ ಕೇಳಿದೆ, ವಾಕಿಂಗ್
ನೆಪದಲ್ಲಿ ಸುಮ್ಮನೆ ಮಳೆಯಲ್ಲಿ ಮನಸೋ ಇಚ್ಛೆ ನೆನೆದೆ. ರಾತ್ರಿ ಮಲಗಿದರೆ ನಿದ್ರೆ ಹತ್ತಿರವೂ ಸುಳಿಯಲಿಲ್ಲ.
ರಾತ್ರಿಯಿಡೀ ಅದೇ ಅಲೋಚನೆ ಮತ್ತೆ ಮತ್ತೆ ಕಾಡುತ್ತಲೇ ಇತ್ತು.
ನನ್ನ ಗುರುಗಳು ಯಾವಾಗಲೂ
ಒಂದು ಮಾತು ಹೇಳುತ್ತಿದ್ದರು. ಸಮಾಜದಲ್ಲಿ ಜನರು ವ್ಯಕ್ತಿಗಳನ್ನು ಟಿಷ್ಯೂವಿನ ಹಾಗೆ ಬಳಸಿಕೊಂಡು ಬಿಸಾಡುವುದೇ
ಹೆಚ್ಚು ಎಂದು. ಅದು ಅಕ್ಷರಶಃ ಅನುಭವಕ್ಕೆ ಬರುತ್ತಿದೆ. ನಿನ್ನ ನಡವಳಿಕೆ ನನ್ನ ಸ್ಥಳ ಯಾವುದು ಎಂಬುದನ್ನು
ಸ್ಪಷ್ಟಪಡಿಸುತ್ತಿರುವ ಹಾಗೆ ಗೋಚರವಾಗುತ್ತಿದೆ. ಅದಕ್ಕೇ ಇರಬೇಕು ಇತ್ತೀಚೆಗೆ ನನಗೆ ಮನುಷ್ಯರ ಜೊತೆಗಿನ
ಸಂಬಂಧ ಬೇಸರದ ಜೊತೆಗೆ ವಿಶ್ವಾಸಘಾತುಕವೆನಿಸುತ್ತಿದೆ. ಈ ಜಗತ್ತಿನ ಸಂಬಂಧ ಕಳಚಿಕೊಳ್ಳುವ ಹಂಬಲ ಹೆಚ್ಚಾಗುತ್ತಿದೆ.
ನೀನು ಯಾವಾಗಲೂ ನನಗೆ
ಹೇಳುತ್ತಿದ್ದೆ ನೆನಪಿದೆಯಾ, ವಾಸ್ತವವಾಗಿ ಪ್ರಸವ ವೇದನೆ ಹೇಗಿರುತ್ತದೆ ಎಂಬ ಸಣ್ಣ ಅನುಭವವೂ ನಿನಗಿಲ್ಲ
ಎಂದು. ಆದರೆ, ನಿನ್ನೆ ರಾತ್ರಿಯಿಂದ ಭಾವನೆಗಳ ಪ್ರಸವ ವೇದನೆ ಒತ್ತರಿಸಿ, ಒತ್ತರಿಸಿ ಬರುತ್ತಿತ್ತು.
ಹಾಗಾಗಿ ಆ ವೇದನೆಯಿಂದ ತಪ್ಪಿಸಿಕೊಳ್ಳಬೇಕಾದರೆ ಬರವಣಿಗೆಯೊಂದೇ ದಾರಿ ಎಂದು ಖಾತ್ರಿಯಾಯಿತು. ಹಾಗಾಗಿಯೇ
ಇಷ್ಟೆಲ್ಲಾ ಹೇಳಬೇಕಾಯಿತು. ಈಗ ಮನಸ್ಸು ಸ್ವಲ್ಪ ಹಗೂರವಾದಂತೆ ಭಾಸವಾಗುತ್ತಿದೆ. ಆದರೂ ಮನಸ್ಸು ಮತ್ತೆ
ಮತ್ತೆ ಅದೇ ಪ್ರಶ್ನೆ ಕೇಳುತ್ತಿದೆ. ನನ್ನ ಅಸ್ಥಿತ್ವ ಕೇವಲ ಕಸಬುಟ್ಟಿ ಅಷ್ಟೇನಾ ಎಂದು?
ನೀನು ಅದೆಷ್ಟೇ ಸಬೂಬು
ನೀಡಿದರೂ ಬಹುಶಃ ವಾಸ್ತವ ಇದೇ ಇರಬಹುದು ಎಂದೇ ಅನಿಸುತ್ತಿದೆ. ಹಾಗೆಂದು ನಿನ್ನಿಂದ ಏನನ್ನೂ ಬಯಸುವ
ಅಭ್ಯಾಸ ನನಗಿಲ್ಲ. ಹಾಗಾಗಿ ನಿರ್ಲಿಪ್ತತೆ ಕಡೆಗೆ ಸಾಗಲು ಸಿದ್ಧತೆ ನಡೆಸುತ್ತಿದ್ದೇನೆ. ಮತ್ತೊಮ್ಮೆ
ಮನಸ್ಸಿನ ಕಡಲಿನಲ್ಲಿ ಅಲೆಗಳನ್ನು ಬಡಿದೇಳಿಸಬೇಡ, ತಡೆದುಕೊಳ್ಳುವ ಕಸುವು ಉಳಿದಿಲ್ಲ ಎಂದಷ್ಟೇ ಹೇಳಬೇಕು
ಎನಿಸುತ್ತಿದೆ. ನಾಳೆಯೋ, ನಾಡಿದ್ದೋ ಮತ್ತೊಮ್ಮೆ ಕರೆ ಮಾಡಿ ಸಹಾಯ ಕೇಳಿದರೆ ಅದೇ ಉತ್ಸಾಹದಲ್ಲಿ ಕೆಲಸಕ್ಕೆ
ಸಿದ್ಧಳಾಗುತ್ತೇನೆ. ಅಲ್ಲಿಯವರೆಗೂ ನನ್ನಷ್ಟಕ್ಕೇ ನಾನು ಇದ್ದುಬಿಡುತ್ತೇನೆ ಜೀವಂತ ಶವದ ಹಾಗೆ.
No comments:
Post a Comment