Sunday, December 15, 2024

ಅಮ್ಮನಿಲ್ಲದೇ ಕಳೆದ ಒಂದು ತಿಂಗಳಲ್ಲಿ ಆಕೆಗೊಂದು ಪತ್ರ

ಅಮ್ಮ ನೀನಿಲ್ಲದೇ ಒಂದು ತಿಂಗಳು ಕಳೆದು ಹೋಯಿತು. ಆದರೆ ಈ ಕ್ಷಣಕ್ಕೂ ನೀನು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಅದೆಲ್ಲೋ ದೂರದಲ್ಲಿ ಇದ್ದೀಯಾ ಎಂಬ ಭರವಸೆಯೇ ಇಲ್ಲಿವರೆಗೂ ನನ್ನನ್ನು ಬದುಕಿಸಿದೆ. ನೀನು ಇದ್ದಾಗ ನಾನು ಅಷ್ಟೊಂದು ಹಚ್ಚಿಕೊಂಡಿಲ್ಲ ಎಂದೇ ತಿರುಗಾಡುತ್ತಿದ್ದೆ; ಆದರೆ ಹೋದ ಮೇಲೆಯೇ ಗೊತ್ತಾದದ್ದು ನೀನು ನನ್ನನ್ನು ಅದೆಷ್ಟು ಆವರಿಸಿಕೊಂಡಿದ್ದೀಯಾ ಎಂಬುದು. ಸಣ್ಣ ಸಣ್ಣ ವಿಚಾರಗಳನ್ನೂ ಮನಸ್ಸಿಗೆ ತೆಗೆದುಕೊಂಡು ಕೊರಗುತ್ತೀಯಾ ಎಂದು ಏನನ್ನೂ ಹೇಳಲು ಬಾಯಿ ಬರುತ್ತಿರಲಿಲ್ಲ. ಆದರೆ ಈಗ ಎಲ್ಲವೂ ಹೇಳಬೇಕು ಎನಿಸುತ್ತಿದೆಯಾದರೂ, ನಿನ್ನ ಗೈರುಹಾಜರಿ ಬಹಳ ಕಾಡುತ್ತಿದೆ. ಆದರೂ ನಿನಗೆ ತಲುಪುತ್ತದೆ ಎಂಬ ಆಶಾಭಾವನೆಯೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ.

ಕಳೆದೊಂದು ತಿಂಗಳಲ್ಲಿ ಅದೆಷ್ಟೋ ಘಟನೆಗಳು ಸಂಭವಿಸಿಬಿಟ್ಟವು. ಅವೆಲ್ಲವಕ್ಕೂ ಮೂಕ ಸಾಕ್ಷಿಯಾಗಿ ನಿಂತಿದ್ದೆ. ನೀನಿಲ್ಲದ ಪ್ರತಿ ಕ್ಷಣವೂ ಯುಗದಂತೆ ಕಾಡುತ್ತಿದೆ. ಯಾವ ಕೆಲಸಕ್ಕೂ ಮನಸ್ಸು ಆಸಕ್ತಿ ತೋರುತ್ತಿಲ್ಲ. ಸುಮ್ಮನೆ ಯಂತ್ರದ ಹಾಗೆ ಕೆಲಸ ಮಾಡುತ್ತಿದ್ದೇನೆ. ಅದೇನು ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಉತ್ತರ ನನ್ನಲ್ಲೂ ಇಲ್ಲ. ಚಕ್ರ ಸುಮ್ಮನೆ ತಿರುಗುತ್ತಿದೆ ಅಷ್ಟೇ.



ಈ ಘಟನೆಯನ್ನು ನಿನಗೆ ಮರೆಯದೇ ಹೇಳಲೇಬೇಕು. ನನ್ನ ವಿದ್ಯಾರ್ಥಿಗಳು ನನ್ನದೇ ಮಕ್ಕಳ ಹಾಗೆ ನಿನ್ನ ಅಗಲಿಕೆಯ ನೋವನ್ನು ಅನುಭವಿಸಿದರು. ನನ್ನ ಬಾಡಿದ ಮುಖ ಅವರಲ್ಲಿ ಅಸಹಾಯಕತೆಯನ್ನು ಪ್ರದರ್ಶಿಸುತ್ತಿತ್ತು. ತರಗತಿಯಲ್ಲಿ ಬಹಳ ಶಿಸ್ತಿನಿಂದ ನನ್ನ ಗೈರುಹಾಜರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಬಹಳ ದೊಡ್ಡವರಾಗಿ ಬಿಟ್ಟರು. ಆದರೆ ಅವರಿಗಾಗಿ ಏನನ್ನೂ ನಾನು ಕೊಡಲು ಸಾಧ್ಯವೇ ಆಗಲಿಲ್ಲ ಎಂಬ ಹತಾಶೆ ಇನ್ನೂ ಕಾಡುತ್ತಿದೆ.

ಅಂದು ನಿನ್ನ ಫೋಟೊಗೆ ಹಾರ ಹಾಕಿ ನೀನು ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾಗ ನೀನು ಎಲ್ಲರ ಮನಸ್ಸಿನಲ್ಲಿ ಅದೆಷ್ಟು ಎತ್ತರಕ್ಕೆ ಬೆಳೆದಿದ್ದೆ ಎಂಬುದು ಅರಿವಾಯಿತು. ಅಲ್ಲದೇ, ಅಂತಹ ಮೇರು ವ್ಯಕ್ತಿಯ ಮಗಳಾಗಿ ನಾನು ಹುಟ್ಟಿದ್ದು ನನ್ನ ಭಾಗ್ಯವೇ ಸರಿ ಎನಿಸಿತು. ಆದರೆ ಆ ಭಾಗ್ಯವನ್ನು ತುಂಬಾ ದಿನ ಅನುಭವಿಸಲು ಸಾಧ್ಯವಾಗಲಿಲ್ಲ ಎಂಬ ನೋವು ಮತ್ತೆ ಮತ್ತೆ ಒತ್ತರಿಸಿ ಬರಲು ಆರಂಭವಾಯಿತು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಶುರುವಾಯಿತು. ಇನ್ನು ಕೆಲಸ ಕೆಟ್ಟಿತು ಎಂದು ಮನೆಯವರೆಲ್ಲಾ ಚಡಪಡಿಸುತ್ತಿದ್ದಾಗ ಅವರೆಲ್ಲರಿಗೂ ಅಮ್ಮನೇ ಎಲ್ಲವನ್ನು ಮಾಡಿಸಿಕೊಳ್ಳುತ್ತಾರೆ ಎಂದೇ ಹೇಳುತ್ತಿದ್ದೆ. ಹಾಗೆಯೇ ನಿರೀಕ್ಷೆಗೂ ಮೀರಿ ಎಲ್ಲರೂ ಬಂದರು. ವೇದಘೋಷ, ಮಂತ್ರಪಠಣ, ರುದ್ರ, ಚಮೆ, ಚತುರ್ವೇದ ಪಾರಾಯಣ ಹೀಗೆ ಎಲ್ಲವೂ ಸಾಂಗವಾಗಿ ನೆರವೇರಿತು. ಈ ಎಲ್ಲಾ ಕಾರ್ಯದಲ್ಲೂ ನಿನ್ನ ಪಾತ್ರವನ್ನು ತೆಗೆದುಹಾಕಲು ಸಾಧ್ಯವೇ ಇಲ್ಲ. ಈ ಎಲ್ಲದರ ಹಿಂದಿನ ಶಕ್ತಿ ನೀನೇ ಆಗಿದ್ದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ.

ಎಂದಿನ ಹಾಗೆ, ಕಾಲೇಜು ಮುಗಿಸಿ ಮನೆಗೆ ಬಂದಾಗ ಫೋನ್‌ ಕೈಗೆತ್ತಿಕೊಂಡು ನಿನ್ನದೇ ಮೊಬೈಲ್‌ ನಂಬರ್‌ಗೆ ಕರೆ ಮಾಡಿ ಮಾತಾಡಬೇಕು ಎನಿಸುತ್ತದೆ. ಆದರೆ ಆ ಕಡೆಯಿಂದ ನಿನ್ನ ಧ್ವನಿ ಕೇಳುವುದೇ ಇಲ್ಲ ಎಂಬ ವಾಸ್ತವ ಅರಿವಿಗೆ ಬಂದು ಮನಸ್ಸು ಮತ್ತೆ ಬಾಡುತ್ತದೆ. ನಿನ್ನದೇ ನೆನಪು ಪ್ರತಿಕ್ಷಣವೂ ಬಿಟ್ಟೂಬಿಡದೇ ನೆರಳಿನಂತೆ ಹಿಂಬಾಲಿಸುತ್ತದೆ. ಮಂಗಳೂರಿಗೆ ಬರುವಾಗ ಪದೆ ಪದೇ ಸೀರೆ ಬಟ್ಟೆ ತರುವುದು ಬೇಡ ಎಂದು ಇಲ್ಲೇ ಬಿಟ್ಟು ಹೋಗಿದ್ದ ನಿನ್ನ ಸೀರೆಯನ್ನು ನೋಡಿದ ಕೂಡಲೇ ಮತ್ತೆ ಯಾರು ಈ ಸೀರೆ ಉಡುತ್ತಾರೆ ಎಂಬ ಪ್ರಶ್ನೆ ಕಾಡುತ್ತದೆ.

ನಿನಗೆ ಅದೇಕೆ ಅಷ್ಟೊಂದು ಆತುರ. ನಾವು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲವೇ. ಅದೇಕೇ ಅಷ್ಟೊಂದು ಆತುರದಲ್ಲಿ ಹೊರಟುಬಿಟ್ಟೆ ನಿನ್ನವರನ್ನೆಲ್ಲಾ ಬಿಟ್ಟು. ನೀನು ಸುಮ್ಮನೆ ಮನೆಯಲ್ಲಿ ಮಲಗಿದ್ದರೂ ನಮಗೆಲ್ಲಾ ಆನೆ ಬಲ ಇರುತ್ತಿತ್ತು. ಈಗ ನೀನೇ ಇಲ್ಲದೇ ನಮಗೆಲ್ಲರಿಗೂ ಬಲವೇ ಇಲ್ಲದಂತಾಗಿದೆ. ಮನೆ ಬಣಗುಡುತ್ತಿದೆ. ಮನೆ ಒಳಗೆ ಕಾಲಿಡಲು ಎರಡೆರಡು ಸಲ ಯೋಚಿಸುವಂತಾಗಿದೆ. ಸಂವರ್ಧಿನಿಗೆ ಕಳೆಯೇ ಇಲ್ಲದೇ ಸೊರಗುತ್ತಿದೆ. ನಿನ್ನ ಅಗಲುವಿಕೆಯನ್ನು ಮನೆಯ ಜೀವ ವಸ್ತುಗಳಲ್ಲದೇ, ನಿರ್ಜೀವ ವಸ್ತುಗಳೂ ಅನುಭವಿಸುತ್ತಿವೆ.



ನೀನು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಆಗದ ಭ್ರಮಾಲೋಕದಲ್ಲಿ ಬದುಕುತ್ತಿದ್ದೇನೆ. ನೀನು ಯಾವಾಗಲೂ ಹೇಳುತ್ತಿದ್ದೆಯಲ್ಲಾ, ನಾನು ಹೋದ ಮೇಲೆ ನಿಮಗೆಲ್ಲಾ ಅಮ್ಮನ ಬೆಲೆ ಗೊತ್ತಾಗುತ್ತದೆ ಎಂದು. ಅದು ಅಕ್ಷರಶಃ ಅರಿವಿಗೆ ಬರುತ್ತಿದೆ. ಪ್ರತಿ ಕೆಲಸ, ಪ್ರತಿ ಮಾತು, ಪ್ರತಿ ಆಲೋಚನೆ ಹೀಗೆ ಎಲ್ಲದರಲ್ಲೂ ನೀನೇ ಆವರಿಸಿಕೊಂಡಿರುವೆ. ನಿನಗೆ ಗೊತ್ತಾ ಅಣ್ಣ, ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ ಜ್ವರ ಬರಿಸಿಕೊಂಡು ಬಿಟ್ಟಿದ್ದಾರೆ. ಶೀತ, ಕೆಮ್ಮು ಬೇರೆ ಶುರುವಾಗಿದೆ. ಸಾಕಷ್ಟು ಕುಗ್ಗಿ ಬಿಟ್ಟಿದ್ದಾರೆ. ಇಷ್ಟು ವರ್ಷ ಜೊತೆಯಾಗಿ ನಿಂತು ಈಗ ಎದ್ದು ಹೋದದ್ದು ಜೀರ್ಣಿಸಿಕೊಳ್ಳಲೇ ಆಗುತ್ತಿಲ್ಲ.

ಹೀಗೆ ಎಲ್ಲರದ್ದು ಒಂದೊಂದು ರೀತಿಯ ನೋವು. ಹೇಳುತ್ತಾ ಹೋದರೆ ಮುಗಿಯದು ಈ ನೋವಿನ ಮಾತು. ಅದೆಷ್ಟು ಹೇಳಿದರೂ ಮಾತು ಮುಗಿಯುವುದೇ ಇಲ್ಲ. ಪ್ರತಿ ಮಾತಿನಲ್ಲೂ ನಿನ್ನದೇ ನೆನಪು, ನಿನ್ನದೇ ಕನವರಿಕೆ ಅಮ್ಮ. ಮತ್ತೆ ಕೇಳಿಕೊಳ್ಳುತ್ತಿದ್ದೇನೆ ಹಿಂದಿನಂತೆ ಮುಂದೆಯೂ ಕೈ ಹಿಡಿದು ನಡೆಸು, ಆದಷ್ಟು ಬೇಗ ನಿನ್ನ ಬಳಿಗೆ ನನ್ನನ್ನೂ ಸೇರಿಸಿಕೊ. ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುತ್ತೇನೆ. ಮತ್ತೆ ಮತ್ತೆ ಕಾಡುವ ಮಾತಿನೊಂದಿಗೆ ಸಿಗುತ್ತೇನೆ.

ಬಡಿದೆಬ್ಬಿಸದಿರು ಮನಸ್ಸಿನ ಅಲೆಗಳನ್ನು, ತಡೆಯುವ ಕಸುವು ಉಳಿದಿಲ್ಲ ಗೆಳೆಯಾ!

 ಆ ದಿನ ನಾಳೆ ಊಟ ತರಬೇಡ ಅಂತಾ ಹೇಳಿ ಊಟದ ಮೆನುವನ್ನು ವಿವರಿಸಿದ್ದೆ. ಹಾಗಾಗಿ ಮರುದಿನ ಕಾಲೇಜಿಗೆ ಬರುವಾಗ ಊಟದ ಡಬ್ಬಿಯ ಜೊತೆಗೆ ಬರಲಿಲ್ಲ. ಕಾರ್ಯಕ್ರಮಕ್ಕಂತೂ ಆಹ್ವಾನ ನೀಡಲಿಲ್ಲ. ಹಿಂದಿನ ದಿನ ಹೇಳಿದ ಹಾಗೆ ಊಟಕ್ಕಾದರೂ ಕರೆಯುವೆ ಎಂದು ಮಧ್ಯಾಹ್ನವಿಡೀ ಕಾದು ಕೊನೆಗೆ ಖಾಲಿ ಹೊಟ್ಟೆಯಲ್ಲೇ ಸಂಜೆ ಮನೆಗೆ ತೆರಳಿ ಬಿಟ್ಟೆ.

ವಾಸ್ತವವಾಗಿ, ಊಟ ನನಗೆ ಮುಖ್ಯ ವಿಷಯವಲ್ಲ; ನಿನ್ನ ಮಾತಿಗೆ ಗೌರವ ಕೊಡಬೇಕೆಂಬ ಹಂಬಲವಷ್ಟೇ. ಮನಸ್ಸು ರಚ್ಚೆ ಹಿಡಿಯದಿರಲಿ ಎಂಬ ಕಾರಣಕ್ಕೆ, ಬಹುಶಃ ನೀನು ಕಾರ್ಯಕ್ರಮದ ಗಡಿಬಿಡಿಯಲ್ಲಿ ಮರೆತು ಹೋಗಿರಬಹುದು ಎಂದು ಸಮಾಧಾನ ಮಾಡಿಕೊಂಡೆ. ಆದರೆ ಹಸಿವು ಸುಮ್ಮನೆ ಕೂರಲು ಬಿಡಲಿಲ್ಲ. ಹಾಗಾಗಿ ಹೀಗೆ ಬರೆದು ಭಾರ ಇಳಿಸಿಕೊಳ್ಳುತ್ತಿದ್ದೇನೆ. ತಪ್ಪು ತಿಳಿಯಬೇಡ.

ನೀನು ನನಗಿಂತಲೂ ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯವನಾಗಿದ್ದರೂ, ನಾವಿಬ್ಬರೂ ಅದೆಷ್ಟೋ ದಿನಗಳನ್ನು, ಸಂಜೆಗಳನ್ನು ಜೊತೆಗೆ ಕಳೆದಿದ್ದೇವೆ. ಆಗೆಲ್ಲಾ ನಮ್ಮಿಬ್ಬರ ಮಧ್ಯೆ ಸಾಕಷ್ಟು ಚರ್ಚೆ, ವಾಗ್ವಾದ, ಸಣ್ಣ ಜಗಳ ಎಲ್ಲವೂ ಆಗಿದೆ. ಅದಾವುದಕ್ಕೂ ಅಷ್ಟೊಂದು ಮಹತ್ವ ಕೊಡಲಿಲ್ಲ. ಸಾಕಷ್ಟು ಸಂದರ್ಭಗಳಲ್ಲಿ ಮನಸ್ಸು ಬೇಸರಕ್ಕೆ ತಿರುಗಿದ್ದೂ ಇದೆ. ಅದೆಲ್ಲವನ್ನೂ ಪಕ್ಕಕ್ಕಿರಿಸಿ ಮುಂದೆ ಸಾಗಿದ್ದೇವೆ. ಅದೆಷ್ಟೋ ಬಾರಿ ನೀನು ಕೇಳಿದ ಸಹಾಯಕ್ಕೋ ಅಥವಾ ಮತ್ತಾವುದೋ ಕೆಲಸಕ್ಕೋ ಇಲ್ಲ ಎಂದು ಹೇಳಬೇಕೆಂದು ಗಟ್ಟಿ ಮನಸ್ಸು ಮಾಡಿದರೂ, ನಿನ್ನ ಧ್ವನಿ ಕೇಳಿದ ಕೂಡಲೇ ಎಲ್ಲವನ್ನು ಕ್ಷಣ ಮಾತ್ರದಲ್ಲಿ ಮರೆತು ಬಿಡುತ್ತಿದ್ದೆ. ಅದೇನು ಮೋಡಿ ಮಾಡಿದ್ದೀಯೋ ತಿಳಿದಿಲ್ಲ. ಮನಸ್ಸಿನ ಆಳಕ್ಕೆ ಇಳಿದುಬಿಟ್ಟಿರುವೆ.

ನಾನು ಸ್ವಲ್ಪ ಅಂತರ್ಮುಖಿ. ಯಾರ ಜೊತೆಗೂ ಇರದ ಸಲುಗೆ ನಿನ್ನೊಂದಿಗೆ ಬೆಳೆದಿದೆ. ಹಾಗಾಗಿ ನನ್ನ ಪರಿಸ್ಥಿತಿ ಏನೇ ಇದ್ದರೂ ನಿನ್ನ ಮಾತಿಗೆ ಕಟ್ಟುಬಿದ್ದು ಕೆಲಸಕ್ಕೆ ಮುಂದಾಗುತ್ತೇನೆ. ಆದರೆ ಇತ್ತೀಚೆಗೆ ನನ್ನನ್ನು ಬಳಸಿಕೊಂಡ ರೀತಿ ಮಾತ್ರ ಬಹಳ ಬೇಸರ ತರಿಸುತ್ತಿದೆ. ಹಾಗೆಂದು ನನಗೆ ವಿಶೇಷ ಸ್ಥಾನಮಾನ ಬೇಕೆಂದು ಅಥವಾ ಬೇರೆ ಯಾವುದೇ ರೀತಿಯ ಪ್ರಾಶಸ್ತ್ಯ ಬೇಕೆಂದೂ ಬಯಸುವುದಿಲ್ಲ. ಆದರೆ ನಿನ್ನ ಅಗತ್ಯ ಪೂರೈಸಿದ ನಂತರ ನನ್ನ ಪರಿಚಯವೇ ಇಲ್ಲದಂತೆ ನಡೆದುಕೊಳ್ಳುವ ನಿನ್ನ ವರ್ತನೆ ಮನಸ್ಸಿಗೆ ಘಾಸಿ ಮಾಡುತ್ತಿದೆ.

ಎಲ್ಲರ ಹಾಗೆ ನೀನಲ್ಲಾ. ಒಬ್ಬ ಸೂಕ್ಷ್ಮ, ಸಂವೇದನಾಶೀಲ, ಪ್ರೌಢ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿ ಎಂಬ ಕಾರಣಕ್ಕಾಗಿಯೇ ಮನಸ್ಸಿನ ಒಳಗೆ ಬಿಟ್ಟುಕೊಂಡೆ. ನನ್ನ ಪರಿಸ್ಥಿತಿ ಎಂಥಹದ್ದೇ ಇದ್ದರೂ ಅದನ್ನು ಲೆಕ್ಕಿಸದೇ ನನ್ನ ಜೊತೆಗೆ ನೀನು ಆತ್ಮೀಯ ಸಂಬಂಧ ಬೆಳೆಸಿದೆ. ಎಲ್ಲರ ಹಾಗೆ ನೀನಲ್ಲ ಎಂಬುದು ಆ ಕ್ಷಣಕ್ಕೆ ನನಗೆ ಮನವರಿಕೆಯಾಗಿತ್ತು.

ಹೌದು! ನಿನಗೆ ನಿನ್ನದೇ ಆದ ಸಾಕಷ್ಟು ಒತ್ತಡಗಳು, ಕೆಲಸಗಳು ಎಲ್ಲವೂ ಇದ್ದಾವೆ ಎಂಬುದು ನನಗೆ ಸ್ಪಷ್ಟವಾಗಿ ಅರಿವಿದೆ ಗೆಳೆಯ. ಆದರೆ ಇತ್ತೀಚೆಗೆ ನೀನು ನಡೆದುಕೊಳ್ಳುವ ರೀತಿಗೆ ಮನದಲ್ಲಿ ಒಂದು ಸಣ್ಣ ಆತಂಕ ಮೂಡುತ್ತಿದೆ. ಅಂದು ಸಂಜೆಗೆ ಮನೆಗೆ ಬಂದ ಮೇಲೂ ಮನಸ್ಸು ತಹಬದಿಗೆ ಬರಲಿಲ್ಲ. ಹಾಗಾಗಿ ಇಷ್ಟದ ಸಂಗೀತ ಕೇಳಿದೆ, ವಾಕಿಂಗ್ ನೆಪದಲ್ಲಿ ಸುಮ್ಮನೆ ಮಳೆಯಲ್ಲಿ ಮನಸೋ ಇಚ್ಛೆ ನೆನೆದೆ. ರಾತ್ರಿ ಮಲಗಿದರೆ ನಿದ್ರೆ ಹತ್ತಿರವೂ ಸುಳಿಯಲಿಲ್ಲ. ರಾತ್ರಿಯಿಡೀ ಅದೇ ಅಲೋಚನೆ ಮತ್ತೆ ಮತ್ತೆ ಕಾಡುತ್ತಲೇ ಇತ್ತು.

ನನ್ನ ಗುರುಗಳು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಸಮಾಜದಲ್ಲಿ ಜನರು ವ್ಯಕ್ತಿಗಳನ್ನು ಟಿಷ್ಯೂವಿನ ಹಾಗೆ ಬಳಸಿಕೊಂಡು ಬಿಸಾಡುವುದೇ ಹೆಚ್ಚು ಎಂದು. ಅದು ಅಕ್ಷರಶಃ ಅನುಭವಕ್ಕೆ ಬರುತ್ತಿದೆ. ನಿನ್ನ ನಡವಳಿಕೆ ನನ್ನ ಸ್ಥಳ ಯಾವುದು ಎಂಬುದನ್ನು ಸ್ಪಷ್ಟಪಡಿಸುತ್ತಿರುವ ಹಾಗೆ ಗೋಚರವಾಗುತ್ತಿದೆ. ಅದಕ್ಕೇ ಇರಬೇಕು ಇತ್ತೀಚೆಗೆ ನನಗೆ ಮನುಷ್ಯರ ಜೊತೆಗಿನ ಸಂಬಂಧ ಬೇಸರದ ಜೊತೆಗೆ ವಿಶ್ವಾಸಘಾತುಕವೆನಿಸುತ್ತಿದೆ. ಈ ಜಗತ್ತಿನ ಸಂಬಂಧ ಕಳಚಿಕೊಳ್ಳುವ ಹಂಬಲ ಹೆಚ್ಚಾಗುತ್ತಿದೆ.

ನೀನು ಯಾವಾಗಲೂ ನನಗೆ ಹೇಳುತ್ತಿದ್ದೆ ನೆನಪಿದೆಯಾ, ವಾಸ್ತವವಾಗಿ ಪ್ರಸವ ವೇದನೆ ಹೇಗಿರುತ್ತದೆ ಎಂಬ ಸಣ್ಣ ಅನುಭವವೂ ನಿನಗಿಲ್ಲ ಎಂದು. ಆದರೆ, ನಿನ್ನೆ ರಾತ್ರಿಯಿಂದ ಭಾವನೆಗಳ ಪ್ರಸವ ವೇದನೆ ಒತ್ತರಿಸಿ, ಒತ್ತರಿಸಿ ಬರುತ್ತಿತ್ತು. ಹಾಗಾಗಿ ಆ ವೇದನೆಯಿಂದ ತಪ್ಪಿಸಿಕೊಳ್ಳಬೇಕಾದರೆ ಬರವಣಿಗೆಯೊಂದೇ ದಾರಿ ಎಂದು ಖಾತ್ರಿಯಾಯಿತು. ಹಾಗಾಗಿಯೇ ಇಷ್ಟೆಲ್ಲಾ ಹೇಳಬೇಕಾಯಿತು. ಈಗ ಮನಸ್ಸು ಸ್ವಲ್ಪ ಹಗೂರವಾದಂತೆ ಭಾಸವಾಗುತ್ತಿದೆ. ಆದರೂ ಮನಸ್ಸು ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತಿದೆ. ನನ್ನ ಅಸ್ಥಿತ್ವ ಕೇವಲ ಕಸಬುಟ್ಟಿ ಅಷ್ಟೇನಾ ಎಂದು?

ನೀನು ಅದೆಷ್ಟೇ ಸಬೂಬು ನೀಡಿದರೂ ಬಹುಶಃ ವಾಸ್ತವ ಇದೇ ಇರಬಹುದು ಎಂದೇ ಅನಿಸುತ್ತಿದೆ. ಹಾಗೆಂದು ನಿನ್ನಿಂದ ಏನನ್ನೂ ಬಯಸುವ ಅಭ್ಯಾಸ ನನಗಿಲ್ಲ. ಹಾಗಾಗಿ ನಿರ್ಲಿಪ್ತತೆ ಕಡೆಗೆ ಸಾಗಲು ಸಿದ್ಧತೆ ನಡೆಸುತ್ತಿದ್ದೇನೆ. ಮತ್ತೊಮ್ಮೆ ಮನಸ್ಸಿನ ಕಡಲಿನಲ್ಲಿ ಅಲೆಗಳನ್ನು ಬಡಿದೇಳಿಸಬೇಡ, ತಡೆದುಕೊಳ್ಳುವ ಕಸುವು ಉಳಿದಿಲ್ಲ ಎಂದಷ್ಟೇ ಹೇಳಬೇಕು ಎನಿಸುತ್ತಿದೆ. ನಾಳೆಯೋ, ನಾಡಿದ್ದೋ ಮತ್ತೊಮ್ಮೆ ಕರೆ ಮಾಡಿ ಸಹಾಯ ಕೇಳಿದರೆ ಅದೇ ಉತ್ಸಾಹದಲ್ಲಿ ಕೆಲಸಕ್ಕೆ ಸಿದ್ಧಳಾಗುತ್ತೇನೆ. ಅಲ್ಲಿಯವರೆಗೂ ನನ್ನಷ್ಟಕ್ಕೇ ನಾನು ಇದ್ದುಬಿಡುತ್ತೇನೆ ಜೀವಂತ ಶವದ ಹಾಗೆ.