Sunday, December 15, 2024

ಅಮ್ಮನಿಲ್ಲದೇ ಕಳೆದ ಒಂದು ತಿಂಗಳಲ್ಲಿ ಆಕೆಗೊಂದು ಪತ್ರ

ಅಮ್ಮ ನೀನಿಲ್ಲದೇ ಒಂದು ತಿಂಗಳು ಕಳೆದು ಹೋಯಿತು. ಆದರೆ ಈ ಕ್ಷಣಕ್ಕೂ ನೀನು ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಅದೆಲ್ಲೋ ದೂರದಲ್ಲಿ ಇದ್ದೀಯಾ ಎಂಬ ಭರವಸೆಯೇ ಇಲ್ಲಿವರೆಗೂ ನನ್ನನ್ನು ಬದುಕಿಸಿದೆ. ನೀನು ಇದ್ದಾಗ ನಾನು ಅಷ್ಟೊಂದು ಹಚ್ಚಿಕೊಂಡಿಲ್ಲ ಎಂದೇ ತಿರುಗಾಡುತ್ತಿದ್ದೆ; ಆದರೆ ಹೋದ ಮೇಲೆಯೇ ಗೊತ್ತಾದದ್ದು ನೀನು ನನ್ನನ್ನು ಅದೆಷ್ಟು ಆವರಿಸಿಕೊಂಡಿದ್ದೀಯಾ ಎಂಬುದು. ಸಣ್ಣ ಸಣ್ಣ ವಿಚಾರಗಳನ್ನೂ ಮನಸ್ಸಿಗೆ ತೆಗೆದುಕೊಂಡು ಕೊರಗುತ್ತೀಯಾ ಎಂದು ಏನನ್ನೂ ಹೇಳಲು ಬಾಯಿ ಬರುತ್ತಿರಲಿಲ್ಲ. ಆದರೆ ಈಗ ಎಲ್ಲವೂ ಹೇಳಬೇಕು ಎನಿಸುತ್ತಿದೆಯಾದರೂ, ನಿನ್ನ ಗೈರುಹಾಜರಿ ಬಹಳ ಕಾಡುತ್ತಿದೆ. ಆದರೂ ನಿನಗೆ ತಲುಪುತ್ತದೆ ಎಂಬ ಆಶಾಭಾವನೆಯೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ.

ಕಳೆದೊಂದು ತಿಂಗಳಲ್ಲಿ ಅದೆಷ್ಟೋ ಘಟನೆಗಳು ಸಂಭವಿಸಿಬಿಟ್ಟವು. ಅವೆಲ್ಲವಕ್ಕೂ ಮೂಕ ಸಾಕ್ಷಿಯಾಗಿ ನಿಂತಿದ್ದೆ. ನೀನಿಲ್ಲದ ಪ್ರತಿ ಕ್ಷಣವೂ ಯುಗದಂತೆ ಕಾಡುತ್ತಿದೆ. ಯಾವ ಕೆಲಸಕ್ಕೂ ಮನಸ್ಸು ಆಸಕ್ತಿ ತೋರುತ್ತಿಲ್ಲ. ಸುಮ್ಮನೆ ಯಂತ್ರದ ಹಾಗೆ ಕೆಲಸ ಮಾಡುತ್ತಿದ್ದೇನೆ. ಅದೇನು ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಉತ್ತರ ನನ್ನಲ್ಲೂ ಇಲ್ಲ. ಚಕ್ರ ಸುಮ್ಮನೆ ತಿರುಗುತ್ತಿದೆ ಅಷ್ಟೇ.



ಈ ಘಟನೆಯನ್ನು ನಿನಗೆ ಮರೆಯದೇ ಹೇಳಲೇಬೇಕು. ನನ್ನ ವಿದ್ಯಾರ್ಥಿಗಳು ನನ್ನದೇ ಮಕ್ಕಳ ಹಾಗೆ ನಿನ್ನ ಅಗಲಿಕೆಯ ನೋವನ್ನು ಅನುಭವಿಸಿದರು. ನನ್ನ ಬಾಡಿದ ಮುಖ ಅವರಲ್ಲಿ ಅಸಹಾಯಕತೆಯನ್ನು ಪ್ರದರ್ಶಿಸುತ್ತಿತ್ತು. ತರಗತಿಯಲ್ಲಿ ಬಹಳ ಶಿಸ್ತಿನಿಂದ ನನ್ನ ಗೈರುಹಾಜರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಬಹಳ ದೊಡ್ಡವರಾಗಿ ಬಿಟ್ಟರು. ಆದರೆ ಅವರಿಗಾಗಿ ಏನನ್ನೂ ನಾನು ಕೊಡಲು ಸಾಧ್ಯವೇ ಆಗಲಿಲ್ಲ ಎಂಬ ಹತಾಶೆ ಇನ್ನೂ ಕಾಡುತ್ತಿದೆ.

ಅಂದು ನಿನ್ನ ಫೋಟೊಗೆ ಹಾರ ಹಾಕಿ ನೀನು ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾಗ ನೀನು ಎಲ್ಲರ ಮನಸ್ಸಿನಲ್ಲಿ ಅದೆಷ್ಟು ಎತ್ತರಕ್ಕೆ ಬೆಳೆದಿದ್ದೆ ಎಂಬುದು ಅರಿವಾಯಿತು. ಅಲ್ಲದೇ, ಅಂತಹ ಮೇರು ವ್ಯಕ್ತಿಯ ಮಗಳಾಗಿ ನಾನು ಹುಟ್ಟಿದ್ದು ನನ್ನ ಭಾಗ್ಯವೇ ಸರಿ ಎನಿಸಿತು. ಆದರೆ ಆ ಭಾಗ್ಯವನ್ನು ತುಂಬಾ ದಿನ ಅನುಭವಿಸಲು ಸಾಧ್ಯವಾಗಲಿಲ್ಲ ಎಂಬ ನೋವು ಮತ್ತೆ ಮತ್ತೆ ಒತ್ತರಿಸಿ ಬರಲು ಆರಂಭವಾಯಿತು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಶುರುವಾಯಿತು. ಇನ್ನು ಕೆಲಸ ಕೆಟ್ಟಿತು ಎಂದು ಮನೆಯವರೆಲ್ಲಾ ಚಡಪಡಿಸುತ್ತಿದ್ದಾಗ ಅವರೆಲ್ಲರಿಗೂ ಅಮ್ಮನೇ ಎಲ್ಲವನ್ನು ಮಾಡಿಸಿಕೊಳ್ಳುತ್ತಾರೆ ಎಂದೇ ಹೇಳುತ್ತಿದ್ದೆ. ಹಾಗೆಯೇ ನಿರೀಕ್ಷೆಗೂ ಮೀರಿ ಎಲ್ಲರೂ ಬಂದರು. ವೇದಘೋಷ, ಮಂತ್ರಪಠಣ, ರುದ್ರ, ಚಮೆ, ಚತುರ್ವೇದ ಪಾರಾಯಣ ಹೀಗೆ ಎಲ್ಲವೂ ಸಾಂಗವಾಗಿ ನೆರವೇರಿತು. ಈ ಎಲ್ಲಾ ಕಾರ್ಯದಲ್ಲೂ ನಿನ್ನ ಪಾತ್ರವನ್ನು ತೆಗೆದುಹಾಕಲು ಸಾಧ್ಯವೇ ಇಲ್ಲ. ಈ ಎಲ್ಲದರ ಹಿಂದಿನ ಶಕ್ತಿ ನೀನೇ ಆಗಿದ್ದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ.

ಎಂದಿನ ಹಾಗೆ, ಕಾಲೇಜು ಮುಗಿಸಿ ಮನೆಗೆ ಬಂದಾಗ ಫೋನ್‌ ಕೈಗೆತ್ತಿಕೊಂಡು ನಿನ್ನದೇ ಮೊಬೈಲ್‌ ನಂಬರ್‌ಗೆ ಕರೆ ಮಾಡಿ ಮಾತಾಡಬೇಕು ಎನಿಸುತ್ತದೆ. ಆದರೆ ಆ ಕಡೆಯಿಂದ ನಿನ್ನ ಧ್ವನಿ ಕೇಳುವುದೇ ಇಲ್ಲ ಎಂಬ ವಾಸ್ತವ ಅರಿವಿಗೆ ಬಂದು ಮನಸ್ಸು ಮತ್ತೆ ಬಾಡುತ್ತದೆ. ನಿನ್ನದೇ ನೆನಪು ಪ್ರತಿಕ್ಷಣವೂ ಬಿಟ್ಟೂಬಿಡದೇ ನೆರಳಿನಂತೆ ಹಿಂಬಾಲಿಸುತ್ತದೆ. ಮಂಗಳೂರಿಗೆ ಬರುವಾಗ ಪದೆ ಪದೇ ಸೀರೆ ಬಟ್ಟೆ ತರುವುದು ಬೇಡ ಎಂದು ಇಲ್ಲೇ ಬಿಟ್ಟು ಹೋಗಿದ್ದ ನಿನ್ನ ಸೀರೆಯನ್ನು ನೋಡಿದ ಕೂಡಲೇ ಮತ್ತೆ ಯಾರು ಈ ಸೀರೆ ಉಡುತ್ತಾರೆ ಎಂಬ ಪ್ರಶ್ನೆ ಕಾಡುತ್ತದೆ.

ನಿನಗೆ ಅದೇಕೆ ಅಷ್ಟೊಂದು ಆತುರ. ನಾವು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲವೇ. ಅದೇಕೇ ಅಷ್ಟೊಂದು ಆತುರದಲ್ಲಿ ಹೊರಟುಬಿಟ್ಟೆ ನಿನ್ನವರನ್ನೆಲ್ಲಾ ಬಿಟ್ಟು. ನೀನು ಸುಮ್ಮನೆ ಮನೆಯಲ್ಲಿ ಮಲಗಿದ್ದರೂ ನಮಗೆಲ್ಲಾ ಆನೆ ಬಲ ಇರುತ್ತಿತ್ತು. ಈಗ ನೀನೇ ಇಲ್ಲದೇ ನಮಗೆಲ್ಲರಿಗೂ ಬಲವೇ ಇಲ್ಲದಂತಾಗಿದೆ. ಮನೆ ಬಣಗುಡುತ್ತಿದೆ. ಮನೆ ಒಳಗೆ ಕಾಲಿಡಲು ಎರಡೆರಡು ಸಲ ಯೋಚಿಸುವಂತಾಗಿದೆ. ಸಂವರ್ಧಿನಿಗೆ ಕಳೆಯೇ ಇಲ್ಲದೇ ಸೊರಗುತ್ತಿದೆ. ನಿನ್ನ ಅಗಲುವಿಕೆಯನ್ನು ಮನೆಯ ಜೀವ ವಸ್ತುಗಳಲ್ಲದೇ, ನಿರ್ಜೀವ ವಸ್ತುಗಳೂ ಅನುಭವಿಸುತ್ತಿವೆ.



ನೀನು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಆಗದ ಭ್ರಮಾಲೋಕದಲ್ಲಿ ಬದುಕುತ್ತಿದ್ದೇನೆ. ನೀನು ಯಾವಾಗಲೂ ಹೇಳುತ್ತಿದ್ದೆಯಲ್ಲಾ, ನಾನು ಹೋದ ಮೇಲೆ ನಿಮಗೆಲ್ಲಾ ಅಮ್ಮನ ಬೆಲೆ ಗೊತ್ತಾಗುತ್ತದೆ ಎಂದು. ಅದು ಅಕ್ಷರಶಃ ಅರಿವಿಗೆ ಬರುತ್ತಿದೆ. ಪ್ರತಿ ಕೆಲಸ, ಪ್ರತಿ ಮಾತು, ಪ್ರತಿ ಆಲೋಚನೆ ಹೀಗೆ ಎಲ್ಲದರಲ್ಲೂ ನೀನೇ ಆವರಿಸಿಕೊಂಡಿರುವೆ. ನಿನಗೆ ಗೊತ್ತಾ ಅಣ್ಣ, ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ ಜ್ವರ ಬರಿಸಿಕೊಂಡು ಬಿಟ್ಟಿದ್ದಾರೆ. ಶೀತ, ಕೆಮ್ಮು ಬೇರೆ ಶುರುವಾಗಿದೆ. ಸಾಕಷ್ಟು ಕುಗ್ಗಿ ಬಿಟ್ಟಿದ್ದಾರೆ. ಇಷ್ಟು ವರ್ಷ ಜೊತೆಯಾಗಿ ನಿಂತು ಈಗ ಎದ್ದು ಹೋದದ್ದು ಜೀರ್ಣಿಸಿಕೊಳ್ಳಲೇ ಆಗುತ್ತಿಲ್ಲ.

ಹೀಗೆ ಎಲ್ಲರದ್ದು ಒಂದೊಂದು ರೀತಿಯ ನೋವು. ಹೇಳುತ್ತಾ ಹೋದರೆ ಮುಗಿಯದು ಈ ನೋವಿನ ಮಾತು. ಅದೆಷ್ಟು ಹೇಳಿದರೂ ಮಾತು ಮುಗಿಯುವುದೇ ಇಲ್ಲ. ಪ್ರತಿ ಮಾತಿನಲ್ಲೂ ನಿನ್ನದೇ ನೆನಪು, ನಿನ್ನದೇ ಕನವರಿಕೆ ಅಮ್ಮ. ಮತ್ತೆ ಕೇಳಿಕೊಳ್ಳುತ್ತಿದ್ದೇನೆ ಹಿಂದಿನಂತೆ ಮುಂದೆಯೂ ಕೈ ಹಿಡಿದು ನಡೆಸು, ಆದಷ್ಟು ಬೇಗ ನಿನ್ನ ಬಳಿಗೆ ನನ್ನನ್ನೂ ಸೇರಿಸಿಕೊ. ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುತ್ತೇನೆ. ಮತ್ತೆ ಮತ್ತೆ ಕಾಡುವ ಮಾತಿನೊಂದಿಗೆ ಸಿಗುತ್ತೇನೆ.

No comments:

Post a Comment